ಮುಂಬೈ(ಮಹಾರಾಷ್ಟ್ರ): ಛತ್ರಪತಿ ಶಿವಾಜಿ ಮಹಾರಾಜರ ನಾಡಿನಲ್ಲಿ ಜನರ ಮುಂದೆ ನಮಗೆ ಪ್ರತಿದಿನ ಅವಮಾನವವಾಗುತ್ತಿದೆ, ನಮಗೆ ರಕ್ಷಣೆ ಒದಗಿಸಿ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಎನ್ಸಿಬಿ ಮುಂಬೈ ವಲಯದ ನಿರ್ದೇಶಕ ಸಮೀರ್ ವಾಂಖೆಡೆ ಅವರ ಪತ್ನಿ ಕ್ರಾಂತಿ ರೇಡ್ಕರ್ ಪತ್ರ ಬರೆದಿದ್ದಾರೆ.
ಕ್ರೂಸ್ ಶಿಪ್ ಹಗರಣದಲ್ಲಿ ಬಾಲಿವುಡ್ ನಟ ಶಾರೂಖ್ ಪುತ್ರ ಆರ್ಯನ್ ಖಾನ್ ಬಿಡುಗಡೆಗೆ ಸಮೀರ್ ವಾಂಖೆಡೆ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎಂಬ ಆರೋಪದ ವಿಚಾರಣೆ ನಡೆಯುತ್ತಿರುವ ವೇಳೆಯಲ್ಲಿ ಕ್ರಾಂತಿ ರೇಡ್ಕರ್ ಈ ರೀತಿಯಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಆ ಪತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಬಾಳಾಸಾಹೇಬ್ ಅವರು ಈಗ ಇದ್ದಿದ್ದರೆ, ಇದನ್ನು ಇಷ್ಟಪಡುತ್ತಿರಲಿಲ್ಲ. ಅವರು ಈಗ ಇಲ್ಲ. ಆದರೆ ನೀವಿದ್ದೀರಿ. ಅವರನ್ನು ನಾನು ನಿಮ್ಮಲ್ಲಿ ನೋಡುತ್ತಿದ್ದೇನೆ. ನಾನು ಮತ್ತು ನನ್ನ ಕುಟುಂಬಕ್ಕೆ ನ್ಯಾಯ ಒದಗಿಸುತ್ತೀರಿ ಎಂದು ನಾನು ನಂಬಿದ್ದೇನೆ. ಮರಾಠಿಗಳಾಗಿ ನಾನು ನಿಮ್ಮಲ್ಲಿ ನ್ಯಾಯ ಒದಗಿಸುವ ವಿಶ್ವಾಸ ಇರಿಸಿದ್ದೇನೆ. ನ್ಯಾಯಕ್ಕಾಗಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಕ್ರಾಂತಿ ರೇಡ್ಕರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೂ ಮೊದಲು ಸಮೀರ್ ವಾಂಖೆಡೆ ಸಹೋದರಿ ಯಾಸ್ಮಿನ್ ವಾಂಖೆಡೆ ಮಹಾರಾಷ್ಟ್ರ ಸಚಿವರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆನ್‌ಲೈನ್‌ನಲ್ಲಿ ತನಗೆ ಬೆದರಿಕೆ ಹಾಕುತ್ತಿರುವುದಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಕದ್ದು, ಖಾಸಗಿತನಕ್ಕೆ ಧಕ್ಕೆ ತರುತ್ತಿರುವುದಾಗಿಯೂ ದೂರಿದ್ದರು. ಇದರ ಜೊತೆಗೆ ನವಾಬ್ ಮಲಿಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯಾಸ್ಮಿನ್ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಒತ್ತಾಯಿಸಿದ್ದರು.
ಇದನ್ನೂ ಓದಿ:ಸಚಿವ ನವಾಬ್ ಮಲಿಕ್ ಆನ್‌ಲೈನ್‌ನಲ್ಲಿ ಬೆದರಿಕೆ ಹಾಕುತ್ತಿದ್ದಾರೆ: ಸಮೀರ್ ವಾಂಖೆಡೆ ಸಹೋದರಿ ದೂರು