ಕೋಯಿಕ್ಕೋಡ್ (ಕೇರಳ) : ಕೇರಳ ಎಂದಾಗ ಪ್ರಕೃತಿ ಸೌಂದರ್ಯ ನಮ್ಮ ಕಣ್ಣ ಮುಂದೆ ಬರುತ್ತದೆ. ಇಲ್ಲಿನ ಪ್ರಕೃತಿ ಸೌಂದರ್ಯ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಪ್ರವಾಸಿಗರ ನೆಚ್ಚಿನ ತಾಣವಾಗಿ ದೇವರನಾಡು ಕೇರಳ ಪ್ರಸಿದ್ಧಿ ಪಡೆದಿದೆ. ಇದರ ಹೊರತಾಗಿ ಕೇರಳವು ಆಹಾರದ ವಿಚಾರದಲ್ಲೂ ಮುಂದಿದೆ. ಇಲ್ಲಿನ ಮಲಬಾರಿ ಶೈಲಿಯ ಬಿರಿಯಾನಿ, ವಿವಿಧ ಖಾದ್ಯಗಳು ಜನರನ್ನು ಇನ್ನಿಲ್ಲದಂತೆ ಕಾಡುತ್ತದೆ. ಇದರ ಬೆನ್ನಲ್ಲೇ ಕೇರಳದ ಕೋಯಿಕ್ಕೋಡ್ ಪ್ಯಾರಾಗಾನ್ ರೆಸ್ಟೋರೆಂಟ್ ಮತ್ತು ಇಲ್ಲಿನ ಬಿರಿಯಾನಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ.
ಕೋಯಿಕ್ಕೋಡು ಜಿಲ್ಲೆಯ ಪ್ಯಾರಾಗಾನ್ ರೆಸ್ಟೋರೆಂಟ್ ಕೇರಳ ಮಾತ್ರವಲ್ಲದೆ ಜಗತ್ತಿನಲ್ಲೇ ಹೆಸರುವಾಸಿಯಾಗಿದೆ. ಕೋಯಿಕ್ಕೋಡ್ಗೆ ಆಗಮಿಸುವ ಪ್ರತಿಯೊಬ್ಬ ಪ್ರವಾಸಿಗರನ್ನು ಸೆಳೆಯುವ ಪ್ಯಾರಾಗಾನ್ ರೆಸ್ಟೋರೆಂಟ್ ಜಗತ್ತಿನ ಪ್ರಮುಖ 150 ರೆಸ್ಟೋರೆಂಟ್ ಪಟ್ಟಿಗಳಲ್ಲಿ 11ನೇ ಸ್ಥಾನವನ್ನು ಪಡೆದಿದೆ. ಅಲ್ಲದೆ ಇಲ್ಲಿ ದೊರೆಯುವ ಬಿರಿಯಾನಿಗೆ 11 ನೇ ಸ್ಥಾನ ಲಭಿಸಿದೆ.
ಕ್ರೊಯೇಷಿಯಾ ಮೂಲದ ಆನ್‌ಲೈನ್ ಟ್ರಾವೆಲ್ ಗೈಡ್ ಸಂಸ್ಥೆಯಾಗಿರುವ ಟೇಸ್ಟ್ ಅಟ್ಲಾಸ್, ಈ ಪಟ್ಟಿಯನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ. ಜೂನ್ 23ರ ಶುಕ್ರವಾರದಂದು ಬಿಡುಗಡೆಯಾದ ಈ ಪಟ್ಟಿಯಲ್ಲಿ ಜಗತ್ತಿನ ಪ್ರಮುಖ ರೆಸ್ಟೋರೆಂಟ್ ಮತ್ತು ಅಲ್ಲಿ ಸಿಗುವ ಖಾದ್ಯಗಳನ್ನು ಗುಣಮಟ್ಟ, ರುಚಿ ಆಧಾರ ಮೇಲೆ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ವಿಯೆನ್ನಾದ ಫಿಗ್ಲ್ಮುಲ್ಲರ್ ರೆಸ್ಟೋರೆಂಟ್ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿನ 'ಶ್ನಿಟ್ಜೆಲ್ ವೀನರ್ ಆರ್ಟ್' ಜಗತ್ತಿನ ಅತ್ಯಂತ ರುಚಿಕರ ಆಹಾರ ಎಂದು ಸಂಸ್ಥೆ ಹೇಳಿದೆ. ನ್ಯೂಯಾರ್ಕ್ ನಗರದ 'ಕ್ಯಾಟ್ಜ್ ಡೆಲಿಕಾಟೆಸೆನ್' ರೆಸ್ಟೋರೆಂಟ್ ಎರಡನೇ ಸ್ಥಾನದಲ್ಲಿದೆ. ಇಲ್ಲಿನ 'ಪಾಸ್ಟ್ರಾಮಿ ಆನ್ ರೈ' ಎರಡನೇ ರುಚಿಕರ ಆಹಾರ ಎಂದು ಪರಿಗಣಿಸಲಾಗಿದೆ.
ಅಲ್ಲದೆ ಭಾರತ ರೆಸ್ಟೋರೆಂಟ್ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಉತ್ತರ ಪ್ರದೇಶದ ಲಕ್ನೋದ 'ತುಂಡೆ ಕಬಾಬಿ ರೆಸ್ಟೋರೆಂಟ್' ಮತ್ತು ಇಲ್ಲಿನ 'ಗಲೌಟಿ ಕಬಾಬ್' 12 ನೇ ಸ್ಥಾನ ಗಳಿಸಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದ 'ಪೀಟರ್ ಕ್ಯಾಟ್ ರೆಸ್ಟೋರೆಂಟ್' ಮತ್ತು ಇಲ್ಲಿನ 'ಚೆಲೋ ಕಬಾಬ್'ಗೆ 17ನೇ ಸ್ಥಾನ ಲಭಿಸಿದೆ. ಹರಿಯಾಣದ ಮುರ್ತಾಲ್ನ 'ಅಮ್ರಿಕ್ ಸುಖ್ದೇವ್ ರೆಸ್ಟೋರೆಂಟ್' ಮತ್ತು ಇಲ್ಲಿನ 'ಆಲೂ ಪರಾಟ'ಕ್ಕೆ 23ನೇ ಸ್ಥಾನ ಲಭಿಸಿದೆ. ಇದರ ಹೊರತಾಗಿ ಕರ್ನಾಟಕದ ಬೆಂಗಳೂರಿನ 'ಮಾವೇಲಿ ಟಿಫಿನ್ ರೂಮ್ಸ್' ಮತ್ತು ಇಲ್ಲಿನ 'ರವಾ ಇಡ್ಲಿ'ಗೆ 39ನೇ ಸ್ಥಾನ ಲಭಿಸಿದೆ. ಟಾಪ್ 25 ರೆಸ್ಟೋರೆಂಟ್ಗಳ ಪಟ್ಟಿಯಲ್ಲಿ ಭಾರತದ ನಾಲ್ಕು ರೆಸ್ಟೋರೆಂಟ್ ಮತ್ತು ಖಾದ್ಯಗಳಿಗೆ ಮನ್ನಣೆ ಸಿಕ್ಕಿದೆ.
ಟೇಸ್ಟ್ ಅಟ್ಲಾಸ್ ಸಂಸ್ಥೆಯು ಕ್ರೊವೇಶಿಯಾ ಮೂಲದ ಆನ್‌ಲೈನ್ ಟ್ರಾವೆಲ್ ಗೈಡ್ ಸಂಸ್ಥೆಯಾಗಿದೆ. 2018ರಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಈ ಸಂಸ್ಥೆಯು ಆಹಾರ ವಲಯದಲ್ಲಿ ಅಧಿಕೃತ ಅಧ್ಯಯನ ನಡೆಸಿ ವಿವಿಧ ರೆಸ್ಟೋರೆಂಟ್ ಮತ್ತು ಖಾದ್ಯಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಇವುಗಳಿಗೆ ವಿವಿಧ ಲೇಖನಗಳು, ವಿಮರ್ಶೆಗಳು, ಪ್ರಮಾಣ ಪತ್ರಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಮೂರು ವರ್ಷಗಳಿಂದ ಪ್ಯಾರಾಗಾನ್ ಭಾರತದಲ್ಲಿ ನಂಬರ್ 1 : ಟೇಸ್ಟ್ ಅಟ್ಲಾಸ್ ಪ್ರಕಟಿಸುವ ಪಟ್ಟಿಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ಯಾರಾಗಾನ್ ರೆಸ್ಟೋರೆಂಟ್ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ಈ ಪ್ಯಾರಾಗಾನ್ ಹೋಟೆಲ್ 1939ರಲ್ಲಿ 'ಪ್ಯಾರಾಗಾನ್ ಬೇಕಿಂಗ್ ಕಂಪನಿ' ಎಂದು ಹೆಸರಿನಲ್ಲಿ ಪ್ರಾರಂಭವಾಯಿತು. ಈ ಸಂಸ್ಥೆಯನ್ನು ಪಿ ಗೋವಿಂದನ್ ಮತ್ತು ಅವರ ಮಗ ಪಿಎಂ ವತ್ಸನ್ ಎಂಬವರು ಪ್ರಾರಂಭಿಸಿದ್ದರು. 1977ರಲ್ಲಿ ವತ್ಸನ್ ನಿಧನರಾದ ಬಳಿಕ ಅವರ ಪತ್ನಿ ಸರಸ್ವತಿ ಅವರು ಹೊಟೇಲ್ ಉಸ್ತುವಾರಿಯನ್ನು ವಹಿಸಿಕೊಂಡರು. 1985ರಲ್ಲಿ ಮಗ ಸುಮೇಶ್ ಗೋವಿಂದ್ ಅವರು ಹೋಟೆಲ್ ಅಧಿಕಾರವನ್ನು ವಹಿಸಿಕೊಂಡರು. ಸದ್ಯ ಇವರು ಪ್ಯಾರಾಗಾನ್ ಮಾತ್ರವಲ್ಲದೆ, ಈ ಕಂಪನಿಯ ಅಡಿಯಲ್ಲಿ ಸತ್ಕಾರ, ಎಂಗ್ರಿಲ್ ಮತ್ತು ಬ್ರೌನ್‌ಟೌನ್ ಕೆಫೆಯಂತಹ ಒಟ್ಟು 25 ಸಂಸ್ಥೆ ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಗಳು ಬೆಂಗಳೂರು ಮತ್ತು ಗಲ್ಫ್ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಇದನ್ನೂ ಓದಿ :ರೈಲು ಮಾದರಿಯಲ್ಲೊಂದು ಬಿರಿಯಾನಿ ರೆಸ್ಟೋರೆಂಟ್: ವಿಡಿಯೋ ನೋಡಿ