ಹೈದರಾಬಾದ್: ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊರತುಪಡಿಸಿ ಖಾಸಗಿ ಸ್ಥಳಗಳಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳನ್ನು ತೆರೆಯಲು ಅನುಮತಿ ಕೋರಿ ರಾಜ್ಯದಿಂದ ಬರೆಯಲಾಗಿದ್ದ ಪತ್ರಕ್ಕೆ ಕೇಂದ್ರ ಸರ್ಕಾರ ಸೂಕ್ತ ಮಾರ್ಗಸೂಚಿಗಳೊಂದಿಗೆ ಅನುಮತಿಸಿದೆ.
ದೇಶದಲ್ಲಿ ಕೊರೊನಾ 2ನೇ ಅಲೆ ಶುರುವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ವ್ಯಾಕ್ಸಿನ್ ಅನ್ನು ಹೆಚ್ಚು ಜನರಿಗೆ ಶೀಘ್ರವಾಗಿ ತಲುಪಿಸುವ ಉದ್ದೇಶದಿಂದ ಅಪಾರ್ಟ್ಮೆಂಟ್ಗಳು, ಆರೈಕೆ ಸೌಲಭ್ಯ ಕೇಂದ್ರಗಳು, ಚುನಾವಣಾ ಕೇಂದ್ರಗಳಲ್ಲಿಯೂ ವಿತರಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಕೋರಿತ್ತು.
ಈಗಾಗಲೇ ಲಭ್ಯವಿರುವ ಕೋವಿಡ್ ವ್ಯಾಕ್ಸಿನ್ ಪ್ರತಿ ಹಳ್ಳಿಗೂ ತಲುಪಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಆಯಾ ಉಪ ಪ್ರಾಥಮಿಕ ಕೇಂದ್ರಗಳಿಗೆ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಂತೆಯೇ, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಆಸ್ಪತ್ರೆಗಳನ್ನು ಬಳಸಿಕೊಳ್ಳಬಹುದು. ಈ ಎಲ್ಲಾ ಕೇಂದ್ರಗಳನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇ ಆದರೆ ವ್ಯಾಕ್ಸಿನ್ ಅನ್ನು ನಿಗದಿತ ಜನರಿಗೆ ಅದರಲ್ಲೂ ಹಳ್ಳಿ ವ್ಯಾಪ್ತಿಯ ವೃದ್ದರಿಗೂ ತಲುಪಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೋವಿಡ್ ವ್ಯಾಕ್ಸಿನ್ ಕೇಂದ್ರಗಳು ಅನುಸರಿಸಬೇಕಾದ ಮಾರ್ಗಸೂಚಿಗಳು:
- ವ್ಯಾಕ್ಸಿನೇಷನ್ ಮಾಡಲು ಸಾಕಷ್ಟು ಸ್ಥಳಾವಕಾಶ ( ವಿಶ್ರಾಂತಿ ಗೃಹ, ವ್ಯಾಕ್ಸಿನೇಷನ್ ರೂಮ್, ನಿಗಾ ಕೊಠಡಿ)
- ಲಸಿಕೆ ಶೇಖರಣೆಗಾಗಿ ಕೋಲ್ಡ್ ರೂಮ್ ವ್ಯವಸ್ಥೆ
- ವ್ಯಾಕ್ಸಿನೇಷನ್ ಹಂಚಿಕೆಗಾಗಿ ಸೂಕ್ತ ಸಿಬ್ಬಂದಿ ನಿಯೋಜನೆ
- ಪ್ರತಿಕೂಲ ಘಟನೆಗಳ ನಿರ್ವಹಣೆಗೆ ಸಾಕಷ್ಟು ವ್ಯವಸ್ಥೆಗಳು
ಹೀಗೆ ಪ್ರಾರಂಭಿಸಲಾಗುವ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಕೋ-ವಿನ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯ ಎಂದಿರುವ ಕೇಂದ್ರ, ಈಗಾಗಲೇ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಸುಮಾರು 460 ಖಾಸಗಿ ಆಸ್ಪತ್ರೆಗಳ ಪೈಕಿ ಕೇವಲ 55 ಕೇಂದ್ರಗಳು ಮಾತ್ರ ನೋಂದಾವಣೆ ಮಾಡಿಕೊಂಡಿರುವುದು ತಿಳಿದುಬಂದಿದೆ ಎಂದು ತಿಳಿಸಿದೆ.