ಇಡುಕ್ಕಿ(ಕೇರಳ) :ಪ್ರಪಂಚವು ಪ್ರೀತಿಯಿಂದ ಆವರಿಸಿಕೊಂಡಿದೆ ಎಂಬ ಮಾತು ಸುಳ್ಳಲ್ಲ. ಪ್ರೀತಿಯಿಂದ ಯುದ್ಧವನ್ನೇ ಗೆಲ್ಲಬಹುದು. ಇನ್ನು ಪ್ರಾಣಿಗಳ ಪ್ರೇಮ ನಿಶ್ಕಲ್ಮಶ.
ಇದು ಸುಮಾರು 8 ತಿಂಗಳ ಹಿಂದಿನ ಘಟನೆ. ಕೇರಳದ ಇಡುಕ್ಕಿಯ ಪೆಟ್ಟಿಮುಡಿ ಎಂಬಲ್ಲಿ ಭೂಕುಸಿತ ಸಂಭವಿಸಿತ್ತು. ಈ ಸಂದರ್ಭದಲ್ಲಿ ಕೂವಿ ಎಂಬ ನಾಯಿಯು ಭೂಕುಸಿತ ಆದ ಸ್ಥಳದಲ್ಲಿ ತನ್ನ ಯಜಮಾನನಿನಾಗಿ ತೀವ್ರ ಹುಡುಕಾಟದಲ್ಲಿ ತೊಡಗಿತ್ತು.
8 ತಿಂಗಳ ಬಳಿಕ ತನ್ನ ಯಜಮಾನಿಯನ್ನ ಸೇರಿದ ಕೂವಿ.. ಇದೇ ಸಂದರ್ಭ ಕೂವಿ ರಾಷ್ಟ್ರೀಯ ವಿಪತ್ತು ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿಗೆ ಆ ಸ್ಥಳದಲ್ಲಿ ಎರಡು ವರ್ಷದ ಬಾಲಕಿಯ ಶವವನ್ನು ಪತ್ತೆ ಹಚ್ಚಲು ಸಹಾಯ ಮಾಡಿತ್ತು. ಹಾಗಾಗಿ, ಕೂವಿಯನ್ನು ಪೊಲೀಸರ ಶ್ವಾನ ತರಬೇತುದಾರ ಅಜಿತ್ ಮಾಧವನ್ ಅವರು ತಮ್ಮ ಬಳಿ ಇರಿಸಿಕೊಂಡು, ನೋಡಿಕೊಳ್ಳುತ್ತಿದ್ದರು.
ಇತ್ತ ಕೂವಿಯ ಯಜಮಾನನ ಕುಟುಂಬದ ಪಳನಿಯಮ್ಮ ಎಂಬಾಕೆ ಮಾತ್ರ ಆ ಘಟನೆಯಲ್ಲಿ ಬದುಕುಳಿದಿದ್ದರು. ಪಳನಿಯಮ್ಮ ತಮ್ಮ ನಾಯಿಗಾಗಿ ಹಂಬಲಿಸುತ್ತಿದ್ದ ವಿಚಾರ ತಿಳಿದು ಬಂತು. ಅದನ್ನು ಗಮನಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಪೊಲೀಸ್ ತಂಡಕ್ಕೆ ಕೂವಿಯನ್ನು ಹಸ್ತಾಂತರಿಸುವಂತೆ ಸೂಚನೆ ನೀಡಿದರು.
ಅಂತೆಯೇ ಪೊಲೀಸ್ ತಂಡ ಕೂವಿಯನ್ನು ಪಳನಿಯಮ್ಮನಿಗೆ ಹಸ್ತಾಂತರಿಸಿತು. 8 ತಿಂಗಳ ಬಳಿಕ ತನ್ನ ಮನೆಯಾಕೆಯನ್ನು ಕಂಡ ಶ್ವಾನಕ್ಕೂ, ತಮ್ಮ ಮುದ್ದು ಕೂವಿಯನ್ನು ಕಂಡ ಪಳನಿಯಮ್ಮನ ಸಂತೋಷಕ್ಕೂ ಪಾರವೇ ಇರಲಿಲ್ಲ. ಪ್ರೀತಿ ನಿಶ್ಕಲ್ಮಶವಾಗಿದ್ದು, ದೃಢವಾಗಿದ್ದರೆ ಅದು ಎರಡು ಮನಸ್ಸುಗಳನ್ನು ಮತ್ತೆ ಸೇರಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.