ಕೋಲ್ಕತ್ತಾ: ಕೋಲ್ಕತ್ತಾ ಮೂಲದ ಜಾದವ್‌ಪುರ ವಿಶ್ವವಿದ್ಯಾಲಯವು ಸಂತಾಲಿ ಭಾಷೆಯಲ್ಲಿ ಬರೆದ ಸಾವಿರಾರು ಅಪರೂಪದ ಪತ್ರಿಕೆಗಳ ಡಿಜಿಟಲೀಕರಣವನ್ನು ಪೂರ್ಣಗೊಳಿಸಿದೆ. ಸಂತಾಲ್ ಜನರು ತಮ್ಮ ಭಾಷೆಯಲ್ಲಿ ಸಂಭಾಷಿಸುತ್ತಿದ್ದರು. ಆದರೆ, ಅದನ್ನು ಬರೆಯಲು ವರ್ಣಮಾಲೆಗಳನ್ನು ಅಭಿವೃದ್ಧಿಪಡಿಸಲಿಲ್ಲ. ನಂತರ ಬಂದ ಕ್ರಿಶ್ಚಿಯನ್ ಮಿಷನರಿಗಳಿಂದ ಸಂತಾಲಿ ಭಾಷೆಗೆ ಲಿಖಿತ ರೂಪ ಸಿಕ್ಕಿತು.
ದಾಖಲೆಗಳ ಪ್ರಕಾರ, ಮೊದಲ ಸಂತಾಲಿ ಭಾಷೆಯ ವ್ಯಾಕರಣ ಪುಸ್ತಕವನ್ನು ಕ್ರಿಸ್ತ ಶಕ 1869 ನಲ್ಲಿ ಸಂತಾಲ್ ಪರಗಣದಲ್ಲಿರುವ ಲುಥೆರನ್ ಮಿಷನ್‌ನಲ್ಲಿ ಸ್ಥಾಪಿಸಲಾದ ಮುದ್ರಣಾಲಯದಲ್ಲಿ ಮುದ್ರಿಸಿ, ಪ್ರಕಟಿಸಲಾಯಿತು. ಈ ವೇಳೆ, ಇದೇ ಮುದ್ರಣಾಲಯದಿಂದ ಸಂತಾಲಿ ಭಾಷೆಯಲ್ಲಿ ಇನ್ನಷ್ಟು ಪುಸ್ತಕಗಳು ಪ್ರಕಟವಾದವು. ನಂತರ ಪಶ್ಚಿಮ ಬಂಗಾಳದಲ್ಲಿ ರಘುನಾಥ್ ಮುರ್ಮು ಅವರು ಅಲೋಚಿಕಿ ಎಂದು ಕರೆಯಲ್ಪಡುವ ಸಂತಾಲಿ ವರ್ಣಮಾಲೆಯನ್ನು ರಚಿಸಿದರು. ನಂತರ ಅಲೋಚಿಕಿ ಲಿಪಿಗೆ ಅಧಿಕೃತ ಮನ್ನಣೆ ದೊರೆಯಿತು.
ಜಾದವ್‌ಪುರ ವಿಶ್ವವಿದ್ಯಾನಿಲಯದ ಸಾಗರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ರಾಹಿ ಸರೆನ್ ಅವರ ನೇತೃತ್ವದಲ್ಲಿ ಪತ್ರಿಕೆಗಳ ಸಂಗ್ರಹಣೆ ಮತ್ತು ಡಿಜಿಟಲೀಕರಣದ ಕೆಲಸ ರೂಪ ಪಡೆದುಕೊಂಡಿದೆ. ಅವರು ತಮ್ಮ ತಂಡದೊಂದಿಗೆ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಒಡಿಶಾದ ವಿವಿಧ ಭಾಗಗಳಿಗೆ ತೆರಳಿ ಈ ಪತ್ರಿಕೆಗಳನ್ನು ಸಂಗ್ರಹಿಸಿದ್ದಾರೆ. ಈ ಸಂಗ್ರಹಣೆಗಳು 1890 ರಿಂದ 1975 ರ ಅವಧಿಗೆ ಸೇರಿವೆ ಮತ್ತು ಇವುಗಳೆಲ್ಲವನ್ನೂ ಡಿಜಿಟಲೈಸ್ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಡಾ.ರಾಹಿ ಸರೆನ್, "ನಾವು ಈ ಕೆಲಸವನ್ನು 2020 ರಲ್ಲಿ ಪ್ರಾರಂಭಿಸಿದ್ದೇವು. ಸುಮಾರು 100 ವರ್ಷಗಳ ಹಿಂದೆ ಈ ಪೇಪರ್ಗಳನ್ನು ಮುದ್ರಿಸಲಾಗಿತ್ತು. ಪತ್ರಿಕೆ ಸಂಗ್ರಹಣೆ ವೇಳೆ ನಮಗೆ ಅಪರೂಪದ ಪುಸ್ತಕಗಳು, ಮಾಹಿತಿಯುಕ್ತ ಪತ್ರಿಕೆಗಳು ಮತ್ತು ಜರ್ನಲ್‌ಗಳು ಕಂಡುಬಂದವು. ಇಲ್ಲಿಯವರೆಗೆ 5,000 ಕ್ಕೂ ಹೆಚ್ಚು ಪುಟಗಳನ್ನು ಡಿಜಿಟಲೈಸ್ ಮಾಡಲಾಗಿದೆ" ಎಂದರು.