ಕೋಲ್ಕತ್ತಾ(ಪಶ್ಚಿಮ ಬಂಗಾಳ):ಮೊಬೈಲ್ ಗೇಮಿಂಗ್ ಆ್ಯಪ್ ಇ-ನಗೆಟ್ಸ್ ಮೂಲಕ ಹಲವಾರು ಜನರನ್ನು ವಂಚಿಸಿದ ಪ್ರಮುಖ ಆರೋಪಿ ಅಮೀರ್ ಖಾನ್ ಈತನ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ನಿಂದ ಕೋಲ್ಕತ್ತಾ ಪೊಲೀಸರು 14.53 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೊತ್ತವು ಸೆಪ್ಟೆಂಬರ್ 10 ರಂದು ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದ ಶಾಹಿ ಅಸ್ತಾಬಲ್ ಲೇನ್‌ನಲ್ಲಿರುವ ಅಮೀರ್ ಖಾನ್ ತಂದೆ ನಾಸರ್ ಖಾನ್ ನಿವಾಸದಿಂದ ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡ 17.32 ಕೋಟಿ ರೂ. ಹೊರತುಪಡಿಸಿದ ಮೊತ್ತವಾಗಿದೆ.
ಬಿನಾನ್ಸ್ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ನಲ್ಲಿ ಅಮೀರ್ ಖಾನ್ 14.53 ಕೋಟಿ ರೂ. ಇಟ್ಟಿದ್ದ ಎನ್ನಲಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಿಂದ ಸೆಪ್ಟೆಂಬರ್ 24 ರಂದು ಕೋಲ್ಕತ್ತಾ ಪೊಲೀಸರಿಂದ ಬಂಧಿಸಲ್ಪಟ್ಟ ಅಮೀರ್ ಖಾನ್, ಪ್ರಸ್ತುತ ನಗರ ಪೊಲೀಸರ ವಶದಲ್ಲಿದ್ದಾನೆ. ಕೋಲ್ಕತ್ತಾದ ಕೆಳ ನ್ಯಾಯಾಲಯದಲ್ಲಿ ಈತ ಅಕ್ಟೋಬರ್ 8 ರಂದು ಮುಂದಿನ ವಿಚಾರಣೆಗಾಗಿ ಹಾಜರಾಗಬೇಕಿದೆ.
ಏತನ್ಮಧ್ಯೆ, ಹಗರಣದ ಇತರ ಆರೋಪಿಗಳನ್ನು ಪತ್ತೆಹಚ್ಚಲು ಅಮೀರ್ ಖಾನ್ನನ್ನು ತನ್ನ ಕಸ್ಟಡಿಗೆ ತೆಗೆದುಕೊಳ್ಳಲು ಇಡಿ ಉತ್ಸುಕವಾಗಿದೆ. ಅಕ್ಟೋಬರ್ 8 ರಂದು ನ್ಯಾಯಾಲಯದ ಬೆಳವಣಿಗೆಗಳ ಆಧಾರದ ಮೇಲೆ ಇಡಿ ಈ ವಿಷಯದಲ್ಲಿ ತನ್ನ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಿರ್ಧರಿಸಲಿದೆ. ಸೆಪ್ಟೆಂಬರ್ 10 ರಂದು ಇಡಿ ಮನಿ ಲಾಂಡರಿಂಗ್ ಆ್ಯಕ್ಟ್ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಕೋಲ್ಕತ್ತಾದ ಆರು ಸ್ಥಳಗಳಲ್ಲಿ ದಾಳಿ ನಡೆಸಿತ್ತು.