ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ):ಕಣಿವೆ ನಾಡು ಜಮ್ಮು ಹಾಗೂ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ಮಧ್ಯೆ ನಡೆಯುತ್ತಿದ್ದ ಎನ್‌ಕೌಂಟರ್ ಮಂಗಳವಾರ ಅಂತ್ಯಗೊಂಡಿದೆ. ಮೂವರು ಅಧಿಕಾರಿಗಳ ಸಾವಿಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಲಷ್ಕರ್-ಎ-ತೊಯ್ಬಾ ಕಮಾಂಡರ್ ಉಝೈರ್ ಖಾನ್ ಸೇರಿ ಇಬ್ಬರ ಉಗ್ರರನ್ನು ಹಡೆಮುರಿಕಟ್ಟಲಾಗಿದೆ.
ಇಲ್ಲಿನ ಕೋಕರ್ನಾಗ್‌ನ ಪೀರ್ ಪಂಜಾಲ್ ಬೆಟ್ಟದಲ್ಲಿ ನಡೆದ ಸುದೀರ್ಘ ಎನ್‌ಕೌಂಟರ್‌ನಲ್ಲಿ ಮೂವರು ಅಧಿಕಾರಿಗಳ ಹುತಾತ್ಮಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗಿದೆ. ಉಗ್ರರೊಂದಿಗೆ ನಡೆಯುತ್ತಿರುವ ಎನ್‌ಕೌಂಟರ್ ಕೊನೆಗೊಂಡಿದೆ ಎಂದು ಜಮ್ಮು ಮತ್ತು ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ. ಭಯೋತ್ಪಾದಕರು ಅಡಗಿರುವ ಮಾಹಿತಿ ಮೇರೆಗೆ ಏಳು ದಿನಗಳ ಹಿಂದೆ ಸೇನೆಯ 19ನೇ ರಾಷ್ಟ್ರೀಯ ರೈಫಲ್ಸ್, ಸಿಆರ್‌ಪಿಎಫ್ ಮತ್ತು ಪೊಲೀಸರು ಜಂಟಿಯಾಗಿ ಗಾಡೋಲ್ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಶುರು ಮಾಡಿದ್ದರು.
ಇದನ್ನೂ ಓದಿ:ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ: ಸೇನೆಯ ಕರ್ನಲ್, ಮೇಜರ್ ಸೇರಿ ಮೂವರು ಹುತಾತ್ಮ
ಈ ವೇಳೆ, 19ನೇ ರಾಷ್ಟ್ರೀಯ ರೈಫಲ್ಸ್ ಕಮಾಂಡಿಂಗ್ ಆಫೀಸರ್ ಮನ್‌ಪ್ರೀತ್ ಸಿಂಗ್ ಹುತಾತ್ಮರಾಗಿದ್ದರು. ಅಲ್ಲದೇ, ಮೇಜರ್ ಆಶಿಶ್ ದುಚಕ್ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಹುಮಾಯೂನ್ ಬಟ್ ಕೂಡ ಗಂಭೀರವಾಗಿ ಗಾಯಗೊಂಡು ಪ್ರಾಣತ್ಯಾಗ ಮಾಡಿದ್ದರು. ಮತ್ತೊಬ್ಬ ಯೋಧ ಪ್ರದೀಪ್ ಸಿಂಗ್ ಸಹ ಹುತಾತ್ಮರಾಗಿದ್ದರು. ಇದೀಗ ಎನ್‌ಕೌಂಟರ್ ನಡುವೆ ಕೋಕರ್ನಾಗ್‌ನ ಪಿರ್ ಪಂಜಾಲ್ ಬೆಟ್ಟಗಳಲ್ಲಿ ಅಡಗಿಕೊಂಡಿದ್ದ ಲಷ್ಕರ್-ಎ-ತೊಯ್ಬಾ ಕಮಾಂಡರ್ ಉಝೈರ್ ಖಾನ್ ಹತನಾಗಿದ್ದಾನೆ. ಭದ್ರತಾ ಪಡೆಗಳು ಉಝೈರ್ ಖಾನ್ ಸೇರಿ ಇಬ್ಬರ ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಉಗ್ರರ ಹತ್ಯೆಯೊಂದಿಗೆ ಕಾರ್ಯಾಚರಣೆಯಲ್ಲಿ ಸತ್ತವರ ಸಂಖ್ಯೆ ಆರಕ್ಕೆ ಏರಿದೆ.