ರಾಯಪುರ (ಛತ್ತೀಸಗಢ): ಕಾಂಗ್ರೆಸ್ ತಯಾರಿಸಿದೆ ಎಂದು ಹೇಳಲಾದ ಟೂಲ್ ಕಿಟ್ ಬಗ್ಗೆ ಸದ್ಯ ದೇಶದಲ್ಲಿ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರು ಕೆಡಿಸಲು ಕಾಂಗ್ರೆಸ್ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಇದೇ ವಿಷಯವಾಗಿ ಬಿಜೆಪಿ ಹಲವಾರು ಮಾಹಿತಿಗಳನ್ನು ಇಂಟರನೆಟ್ನಲ್ಲಿ ಪೋಸ್ಟ್ ಮಾಡುತ್ತಿದೆ. ಟೂಲ್ಕಿಟ್ ನಲ್ಲಿ ತನ್ನದೇನೂ ಪಾತ್ರವಿಲ್ಲ ಎಂದಿರುವ ಕಾಂಗ್ರೆಸ್, ಬಿಜೆಪಿ ಈ ವಿಚಾರವನ್ನೆತ್ತಿಕೊಂಡು ಕಾಂಗ್ರೆಸ್ ವಿರುದ್ಧ ಕುತಂತ್ರ ಮಾಡುತ್ತಿದೆ ಎಂದು ಹೇಳಿದೆ. ನಕಲಿ ಟೂಲ್ ಕಿಟ್ ಮೂಲಕ ಬಿಜೆಪಿ ಕಾಂಗ್ರೆಸ್ಸನ್ನು ಗುರಿ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಟೂಲ್ ಕಿಟ್ ಬಗ್ಗೆ ಪ್ರಚಲಿತದಲ್ಲಿರುವ ಕೆಲ ಮಾಹಿತಿಗಳನ್ನು ಇಲ್ಲಿ ಓದುಗರಿಗಾಗಿ ನೀಡುತ್ತಿದ್ದೇವೆ. ಆದರೆ, ಈ ಟೂಲ್ ಕಿಟ್ ನಲ್ಲಿರುವ ಮಾಹಿತಿಗಳೆಲ್ಲವೂ ಸತ್ಯ ಎಂಬುದರ ಬಗ್ಗೆ ಈಟಿವಿ ಭಾರತ ಖಚಿತಪಡಿಸುತ್ತಿಲ್ಲ ಎಂಬುದು ಗಮನದಲ್ಲಿರಲಿ.
ಟೂಲ್ ಕಿಟ್ನಲ್ಲಿವೆ ಎನ್ನಲಾದ 8 ಪ್ರಮುಖ ವಿಷಯಗಳು
- ಹರಿದ್ವಾರದಲ್ಲಿ ಆಯೋಜಿಸಲಾದ ಕುಂಭ ಮೇಳವನ್ನು ಕೊರೊನಾ ಸೂಪರ್ ಸ್ಪ್ರೆಡರ್ ಎಂದು ಪ್ರಚಾರ ಮಾಡಲಾಗುವುದು
- ದೇಶದ ವಿರುದ್ಧ ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಬಳಸಿಕೊಳ್ಳಲಾಗುವುದು
- ಕೊರೊನಾ ಸೋಂಕಿನ ವಿಷಯವನ್ನೇ ಮುಂದೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಹಾಳು ಮಾಡಬೇಕು
- ಕೊರೊನಾ ವೈರಸ್ನ ರೂಪಾಂತರಿ ತಳಿಗಳನ್ನು ಉಲ್ಲೇಖಿಸುವಾಗ ಅವುಗಳಿಗೆ 'ಇಂಡಿಯನ್ ತಳಿ' ಎಂಬ ಹೆಸರು ಬಳಸುವುದು
- ಕೊರೊನಾದಿಂದ ಸತ್ತವರ ಹೆಣಗಳನ್ನು ಸುಡುವ ದೃಶ್ಯಗಳನ್ನು ಬಳಸಿಕೊಂಡು ಅಂತ್ಯ ಸಂಸ್ಕಾರದ ಭೀತಿಯ ಚಿತ್ರಗಳನ್ನು ಮೂಡಿಸುವುದು
- ಪಿಎಂ ಕೇರ್ಸ್ ಫಂಡ್ ವಿರುದ್ಧ ಪ್ರಚಾರ ಮಾಡುವುದು. ಬುದ್ಧಿಜೀವಿಗಳನ್ನು ಬಳಸಿಕೊಂಡು ಪಿಎಂ ಕೇರ್ಸ್ ಫಂಡ್ ವಿರುದ್ಧ ಪ್ರಚಾರ ಮಾಡುವುದು. ಪಿಎಂ ಕೇರ್ಸ್ ಪಂಡ್ನಿಂದ ಪಂಜಾಬ್ ಹಾಗೂ ಛತ್ತೀಸಗಢಗಳಿಗೆ ನೀಡಲಾದ ವೆಂಟಿಲೇಟರುಗಳು ಸರಿಯಾಗಿಲ್ಲ ಎಂಬುದನ್ನೇ ನೆಪವಾಗಿಟ್ಟುಕೊಂಡು ಒಟ್ಟಾರೆ ಎಲ್ಲ ವೆಂಟಿಲೇಟರುಗಳು ನಿರುಪಯುಕ್ತವಾಗಿವೆ ಎಂದು ಬಿಂಬಿಸುವುದು.
- ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಪ್ರಧಾನ ಮಂತ್ರಿಗಳ ಖಾಸಗಿ ಮನೆ ಎಂದು ಬಿಂಬಿಸುವುದು. MODI'S HOUSE ಎಂದು ಪ್ರಚಾರ ಮಾಡುವುದು
- ಕೊರೊನಾ ಸಂಕಷ್ಟದ ಸಮಯದಲ್ಲಿ ಗುಜರಾತ್ ರಾಜ್ಯಕ್ಕೆ ಪ್ರಧಾನಿಯು ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂಬ ಭ್ರಮೆಯನ್ನು ಹುಟ್ಟು ಹಾಕುವುದು. ಗುಜರಾತಿಗೆ ಅತಿ ಹೆಚ್ಚು ಲಸಿಕೆಗಳನ್ನು ಕಳುಹಿಸಲಾಗಿದೆ ಎಂದು ಹೇಳುವುದು.
ಬಿಜೆಪಿ ಆರೋಪಗಳು ಹೀಗಿವೆ:
ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ ಪಾತ್ರಾ ಕಾಂಗ್ರೆಸ್ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. "ಈ ಟೂಲ್ ಕಿಟ್ ಮೂಲಕ ಕಾಂಗ್ರೆಸ್ ತನ್ನ ರಾಜಕೀಯ ಗುರಿಗಳನ್ನು ಈಡೇರಿಸಿಕೊಳ್ಳಲು ಬಯಸಿದೆ. ಈ ಟೂಲ್ ಕಿಟ್ ಮೂಲಕ ಕಾರ್ಯಕರ್ತರು ಹೇಗೆ ಕೆಲಸ ಮಾಡಬೇಕೆಂಬುದನ್ನು ಹೇಳಿ ಕೊಡಲಾಗುತ್ತಿದೆ." ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ನಿಂದ ಎಫ್ಐಆರ್ ದಾಖಲು
ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಉಳಿಸಲು ಬಿಜೆಪಿಯು ನಕಲಿ ಟೂಲ್ ಕಿಟ್ ತಯಾರಿಸಿದೆ ಎಂದು ಆರೋಪಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ಹಿರಿಯ ನಾಯಕರಾದ ಬಿ.ಎಲ್. ಸಂತೋಷ, ಸ್ಮೃತಿ ಇರಾನಿ, ಸಂಬಿತ ಪಾತ್ರಾ ಸೇರಿದಂತೆ ಇನ್ನೂ ಕೆಲವರು ಟೂಲ್ ಕಿಟ್ 'ಕುತಂತ್ರ' ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್, ಇವರೆಲ್ಲರ ವಿರುದ್ಧ ದೆಹಲಿಯಲ್ಲಿ ಎಫ್ಐಆರ್ ದಾಖಲಿಸಿದೆ. ಕಾಂಗ್ರೆಸ್ಸಿನ ತನಿಖಾ ವಿಭಾಗದ ಮುಖ್ಯಸ್ಥ ರಾಜೀವ ಗೌಡ ಮತ್ತು ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥ ರೋಹನ ಗುಪ್ತಾ ಇವರು ದೆಹಲಿಯ ತುಘಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಳ್ಳು ಹರಡುತ್ತಿರುವ ಹಾಗೂ ಕುತಂತ್ರ ಮಾಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ತನಿಖೆ ನಡೆಸಬೇಕೆಂದು ದೂರಿನಲ್ಲಿ ಕೋರಲಾಗಿದೆ.
ಇಂಥ ಸುಳ್ಳುಗಳನ್ನು ಹರಡುತ್ತಿರುವ ಬಿಜೆಪಿ ನಾಯಕರ ಸೋಷಿಯಲ್ ಮೀಡಿಯಾ ಅಕೌಂಟುಗಳನ್ನು ರದ್ದು ಮಾಡಬೇಕೆಂದು ಕೋರಿ ಪ್ರಮುಖ ಸೋಶಿಯಲ್ ಮೀಡಿಯಾ ಸಂಸ್ಥೆಗಳಿಗೆ ಪತ್ರ ಬರೆಯಲಾಗುವುದು ಎಂದೂ ಕಾಂಗ್ರೆಸ್ ತಿಳಿಸಿದೆ.
ಛತ್ತೀಸಗಢದಲ್ಲೂ ಟೂಲ್ ಕಿಟ್ ರಾಜಕೀಯ
ಕಾಂಗ್ರೆಸ್ಸಿನದು ಎಂದು ಹೇಳಲಾದ ಪತ್ರವನ್ನು ಮಾಜಿ ಮುಖ್ಯಮಂತ್ರಿ ರಮಣ ಸಿಂಗ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದು, ಇಂಥ ಪತ್ರದ ಮೂಲಕ ದೇಶದ ಶಾಂತಿ ಸಾಮರಸ್ಯ ಕೆಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.