ಹೈದರಾಬಾದ್:ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು 72ನೇ ಹುಟ್ಟುಹಬ್ಬದ ಸಂಭ್ರಮ. ಅವರ ಜೀವನದಲ್ಲಿ ತಾಯಿ ಹೀರಾಬೆನ್ ಮಹತ್ವದ ಮಾತ್ರ ನಿರ್ವಹಿಸಿದ್ದು, ಇಂದಿಗೂ ಅತ್ಯಂತ ಸರಳ ಜೀವನ ನಡೆಸುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ. ಗುಜರಾತಿನ ವಡ್‌ನಗರದ ಬಡ ಕುಟುಂಬದಲ್ಲಿ ಜನಿಸಿದ ನರೇಂದ್ರ ಮೋದಿ ದೇಶದ ಉನ್ನತ ಸ್ಥಾನವೇರುವ ಮುನ್ನ ಅನೇಕ ನೋವು, ಸಮಸ್ಯೆ ಎದುರಿಸಿದ್ದಾರೆ. ಇಂದು ವಿಶ್ವ ನಾಯಕರಾಗಿ ಗುರುತಿಸಿಕೊಳ್ಳುವಲ್ಲಿ ಅವರ ತಾಯಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.
100 ವರ್ಷ ಆದ್ರೂ ಸಹ ಗುಜರಾತ್ನ ಗಾಂಧಿನಗರದಲ್ಲಿರುವ ಪುತ್ರ ಪಂಕಜ್ ಮೋದಿ ನಿವಾಸದಲ್ಲಿ ಜೀವನ ಸಾಗಿಸುತ್ತಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಜೀವನದಲ್ಲಿ ಯಾವ ರೀತಿಯಾಗಿ ಹೀರೋ ಆಗಿದ್ದರು ಎಂಬುದರ ಮಾಹಿತಿ ಇಲ್ಲಿದೆ.
ನಮೋ ಕುಟುಂಬ: ಹೀರಾಬೆನ್ ಅವರಿಗೆ ಐವರು ಪುತ್ರರು ಹಾಗೂ ಓರ್ವ ಪುತ್ರಿ. ಹಿರಿಯ ಪುತ್ರ ಸೋಭಾಯ್ ಮೋದಿ ಗುಜರಾತ್ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ. ಎರಡನೇ ಮಗ ಅಮೃತಭಾಯ್ ಲೇಥ್ ಮಷಿನ್ ಆಪರೇಟರ್. ಪ್ರಹ್ಲಾದ್ ಭಾಯ್ ಧಾನ್ಯಗಳ ಅಂಗಡಿ ವ್ಯಾಪಾರಿ. ನರೇಂದ್ರ ದಾಮೋದರ ದಾಸ್ ಮೋದಿ ದೇಶದ ಪ್ರಧಾನಿಯಾಗಿ ಸೇವೆ. ಉಳಿದಂತೆ ಪಂಕಜ್ ಮೋದಿ ಗುಜರಾತ್ನಲ್ಲಿ ಸರ್ಕಾರಿ ಕೆಲಸ ಮಾಡ್ತಿದ್ದು, ವಾಸಂತಿ ಬೆಹನ್ ಎಂಬ ಮಗಳಿದ್ದಾರೆ. ಇವರದು ಮಧ್ಯಮ ವರ್ಗದ ಸರಳ ಜೀವನ ನಡೆಸುವ ಕುಟುಂಬ.
13ನೇ ವಯಸ್ಸಿನಲ್ಲೇ ಮೋದಿ ಮದುವೆ:ಮೋದಿ ಅವರಿಗೆ 13 ವರ್ಷವಾಗಿದ್ದ ಸಂದರ್ಭದಲ್ಲೇ ಪೋಷಕರು ಬಲವಂತವಾಗಿ ಜಶೋದಾಬೆನ್ ಎಂಬುವರ ಜೊತೆ ವಿವಾಹ ನಿಶ್ಚಯ ಮಾಡಿದರು. ಮುಂದೆ 5 ವರ್ಷ ಕಳೆದ ಮೇಲೆ ಅಂದರೆ 1968ರಲ್ಲಿ ಜಶೋದಾಬೆನ್ ಅವರನ್ನು ಮೋದಿ ಮನೆಗೆ ಕಳುಹಿಸಿಕೊಡಲಾಯಿತು. ಆದರೆ, ವಿವಾಹಕ್ಕೆ ಮನಸ್ಸು ಹೊಂದಿರದ ಮೋದಿ, ಕೆಲ ದಿನಗಳಷ್ಟೇ ಪತ್ನಿಯ ಜೊತೆ ಕಾಲ ಕಳೆದು ಬಳಿಕ ಅಹಮದಾಬಾದ್‌ನಲ್ಲಿರುವ ಮಾವನ ಕ್ಯಾಂಟೀನ್ ಸೇರಿಕೊಳ್ಳಲು ತೆರಳಿದರು. ಮುಂದೆ ಜಶೋದಾಬೆನ್ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿ, ಸದ್ಯ ನಿವೃತ್ತಿ ಪಡೆದಿದ್ದಾರೆ.
ಬಾಲ್ಯದಲ್ಲೇ ಚಹಾ ಮಾರಿ ಜೀವನ:ಮೋದಿಯವರ ತಂದೆ ವಡ್‌ನಗರದ ರೈಲ್ವೆ ನಿಲ್ದಾಣದಲ್ಲಿ ಚಿಕ್ಕದೊಂದು ಟೀ ಸ್ಟಾಲ್ ಇಟ್ಟುಕೊಂಡಿದ್ದರು. ಅದರ ಆದಾಯ ಅಷ್ಟಕ್ಕಷ್ಟೇ. ಇಂಥ ಸ್ಥಿತಿಯಲ್ಲೇ ಪುಟ್ಟಮನೆಯಲ್ಲಿ ಪೋಷಕರು, ಸೋದರರ ಜೊತೆ ಮೋದಿ ವಾಸ್ತವ್ಯ. ಮೈತುಂಬಾ ಬಡತನವಿದ್ದ ಕಾರಣ ಶ್ರಮ ಎಂಬುದು ಮೋದಿಗೆ ಬಾಲ್ಯದಲ್ಲೇ ಮೈಗೂಡಿತ್ತು. ತಾಯಿಗೆ ಮನೆ ಕೆಲಸದಲ್ಲಿ ನೆರವಾಗುತ್ತಿದ್ದರು. ರೈಲ್ವೆ ನಿಲ್ದಾಣಕ್ಕೆ ತೆರಳಿ ತಂದೆಗೆ ಚಹಾ ಅಂಗಡಿ ನಿರ್ವಹಣೆಯಲ್ಲೂ ಕೈಜೋಡಿಸುತ್ತಿದ್ದರು. ಮುಂದೆ ತಂದೆಗೆ ಈ ಕೆಲಸ ನಿರ್ವಹಿಸುವುದು ಸಾಧ್ಯವಾಗದೆ ಹೋದಾಗ ಸೋದರನ ಜೊತೆಗೂಡಿ ತಾವೇ ಚಹಾ ಅಂಗಡಿ ತೆರೆದು, ಕುಟುಂಬಕ್ಕೆ ನೆರವಾಗುವ ಯತ್ನ ಮಾಡಿದರು. ಇನ್ನು, ಮೋದಿ ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಅವರ ತಂದೆ ಕ್ಯಾನ್ಸರ್ನಿಂದ ನಿಧನರಾಗುತ್ತಾರೆ. ಹೀಗಾಗಿ, ಚಹಾ ಅಂಗಡಿ ಜವಾಬ್ದಾರಿಯನ್ನು ನರೇಂದ್ರ ಮೋದಿ ವಹಿಸಿಕೊಳ್ಳುತ್ತಾರೆ.