ಕರ್ನಾಟಕ

karnataka

ETV Bharat / bharat

5 ವರ್ಷದಿಂದ ರೋಗಿಯ ಉದರೊಳಗಿರುವ ಚಾಕು.. ಹೊಟ್ಟೆ ನೋವು ಪರೀಕ್ಷೆ ವೇಳೆ ದಂಗಾದ ವೈದ್ಯರು! - knife in stomach

ಚಾಕು ಇರಿತ ಉಂಟಾಗಿ ಸಿವಿಲ್​ ಆಸ್ಪತ್ರೆಗೆ ತೆರಳಿದಾಗ ವೈದ್ಯರು ಸೂಕ್ತ ತಪಾಸಣೆ ನಡೆಸದೇ ಚಾಕುವನ್ನು ಹೊಟ್ಟೆಯಲ್ಲೇ ಬಿಟ್ಟಿದ್ದರು. ಐದು ವರ್ಷಗಳಿಂದ ಅದು ವ್ಯಕ್ತಿಯ ಹೊಟ್ಟೆಯಲ್ಲೇ ಉಳಿದಿತ್ತು.

5 ವರ್ಷದಿಂದ ಹೊಟ್ಟೆಯಲ್ಲಿತ್ತು ಚಾಕು
5 ವರ್ಷದಿಂದ ಹೊಟ್ಟೆಯಲ್ಲಿತ್ತು ಚಾಕು

By ETV Bharat Karnataka Team

Published : Oct 29, 2023, 9:52 PM IST

ಅಂಕಲೇಶ್ವರ(ಗುಜರಾತ್):ಅಪಘಾತಕ್ಕೀಡಾಗಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ವ್ಯಕ್ತಿಯ ಹೊಟ್ಟೆಯಲ್ಲಿ ಚಾಕು ಪತ್ತೆಯಾದ ಆಘಾತಕಾರಿ ಘಟನೆ ಗುಜರಾತ್​ನಲ್ಲಿ ಬೆಳಕಿಗೆ ಬಂದಿದೆ. ವಿಚಿತ್ರ ಅಂದರೆ, ಚಾಕು ಕಳೆದ 5 ವರ್ಷಗಳಿಂದ ಆತನ ಹೊಟ್ಟೆಯಲ್ಲೇ ಇದೆ. ಇದೀಗ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರತೆಗೆಯಲು ವೈದ್ಯರು ಮುಂದಾಗಿದ್ದಾರೆ.

ಅಂಕಲೇಶ್ವರ ಗಾರ್ಡನ್ ಸಿಟಿಯ ನಿವಾಸಿಯಾದ ಅತುಲ್ ಗಿರಿ ಚಾಕುವನ್ನು ಕಳೆದ ಐದು ವರ್ಷಗಳಿಂದ ಹೊಟ್ಟೆಯಲ್ಲಿಟ್ಟುಕೊಂಡಿರುವ ವ್ಯಕ್ತಿ. ಏಮ್ಸ್​ ಆಸ್ಪತ್ರೆ ವೈದ್ಯರ ಯಡವಟ್ಟಿನಿಂದಾಗಿ ಆತ ಸತತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಇತ್ತೀಚೆಗೆ ಗಿರಿ ಅಪಘಾತಕ್ಕೀಡಾಗಿದ್ದ. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ತೆರಳಿದಾಗ, ವರ್ಷಗಳಿಂದ ಆತನನ್ನು ಕಾಡುತ್ತಿದ್ದ ಹೊಟ್ಟೆನೋವಿನ ಬಗ್ಗೆಯೂ ವೈದ್ಯರ ಬಳಿ ಹೇಳಿಕೊಂಡಿದ್ದಾನೆ. ವೈದ್ಯರು ಪರೀಕ್ಷಿಸಿ, ಎಕ್ಸ್ ರೇ ಮಾಡಿಸಿದಾಗ ಹೊಟ್ಟೆಯಲ್ಲಿ ಚಾಕು ಪತ್ತೆಯಾಗಿದೆ.

ಇದು ವೈದ್ಯರು, ಗಿರಿಯನ್ನು ಅಚ್ಚರಿಗೀಡು ಮಾಡಿದೆ. 5 ವರ್ಷಗಳಿಂದ ಅತುಲ್ ಗಿರಿ ಹೊಟ್ಟೆಯಲ್ಲಿ ಸಿಲುಕಿಕೊಂಡಿದ್ದ ಚಾಕುವನ್ನು ಹೊರತೆಗೆಯಲು ಇನ್ನೆರಡು ಮೂರು ದಿನಗಳಲ್ಲಿ ಆಪರೇಷನ್ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಚಾಕು ಇರಿದಿದ್ದ ದರೋಡೆಕೋರರು:ಹರಿಯಾಣ ಮೂಲದ ಅತುಲ್​ ಗಿರಿ, ಗುಜರಾತ್​ನಲ್ಲಿ ಚಿನ್ನದ ಅಂಗಡಿ ನಡೆಸುತ್ತಿದ್ದಾನೆ. 5 ವರ್ಷಗಳ ಹಿಂದೆ ದರೋಡೆಕೋರರು ಅಂಗಡಿ ಮೇಲೆ ದಾಳಿ ಮಾಡಿದ್ದರು. ಅಂಗಡಿಯನ್ನು ರಕ್ಷಿಸಿಕೊಳ್ಳಲು ದರೋಡೆಕೋರರ ಜೊತೆಗೆ ಕಾದಾಟ ನಡೆಸುತ್ತಿದ್ದಾಗ ಗಿರಿಗೆ ಚಾಕು ಇರಿಯಲಾಗಿತ್ತು. ಬೆನ್ನಿಗೆ ಚಾಕು ಬಿದ್ದಿದ್ದರಿಂದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಆಸ್ಪತ್ರೆಗೆ ದಾಖಲಾಗಿದ್ದ. ವೈದ್ಯರು ಸೂಕ್ಷ್ಮ ಶಸ್ತ್ರಚಿಕಿತ್ಸೆಯನ್ನು ನಡೆಸಿ, ಬೆನ್ನಿನಿಂದ 6 ಇಂಚು ಉದ್ದದ ಚಾಕುವನ್ನು ಯಶಸ್ವಿಯಾಗಿ ತೆಗೆದು ಹಾಕಿದ್ದರು.

ಆಸ್ಪತ್ರೆಯಿಂದ ಬಿಡುಗಡೆಗೊಂಡು ಹೋಗಿದ್ದ ಗಿರಿಗೆ ಅದೇ ದಿನ ಸಂಜೆ ಮತ್ತೆ ಚಾಕು ಇರಿತ ಉಂಟಾಗಿತ್ತು. ಏಮ್ಸ್ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಆತನನ್ನು ದಾಖಲಿಸಿ, ಚಾಕುವನ್ನು ತೆಗೆಯಲಾಗಿತ್ತು. ಬೆನ್ನಿನ ಡಿಕಂಪ್ರೆಷನ್‌ನ ಚಿಕಿತ್ಸೆ ವಿಧಾನ ಬಳಸಿ ಆಪರೇಷನ್​ ಮಾಡಲಾಗಿತ್ತು ಎಂದು ಏಮ್ಸ್​ನ ಟ್ರಾಮಾ ಕೇಂದ್ರದ ಮುಖ್ಯಸ್ಥ ಡಾ. ಕಮ್ರಾನ್ ಫಾರೂಕ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹೊಟ್ಟೆಯಲ್ಲಿ ವಸ್ತುಗಳ ರಾಶಿ:ಹಿಮಾಚಲ ಪ್ರದೇಶದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ 8 ಚಮಚ, 2 ಸ್ಕ್ರ್ಯೂ ಡ್ರೈವರ್​, 2 ಹಲ್ಲುಜ್ಜುವ ಬ್ರಷ್​​ ಹಾಗೂ 1 ಚಾಕುವನ್ನು ವೈದ್ಯರು ಹೊರತೆಗೆದಿದ್ದರು. 35 ವರ್ಷದ ವ್ಯಕ್ತಿಯಲ್ಲಿ ತೀವ್ರ ಹೊಟ್ಟೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದಾಗ ತಪಾಸಣೆಯ ವೇಳೆ ವೈದ್ಯರು ಹೊಟ್ಟೆಯಲ್ಲಿ ವಸ್ತುಗಳು ಇರುವುದನ್ನು ಪತ್ತೆ ಮಾಡಿದ್ದರು. ಬಳಿಕ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ ವೈದ್ಯರು, ಆತನ ಹೊಟ್ಟೆಯಿಂದ ಈ ಎಲ್ಲ ವಸ್ತುಗಳನ್ನು ಹೊರತೆಗೆದಿದ್ದರು.

ಇದನ್ನೂ ಓದಿ:ಕೇರಳ ಪ್ರಾರ್ಥನಾ ಸಭೆಯಲ್ಲಿ ಸ್ಫೋಟ ಪ್ರಕರಣ: ಘಟನೆಯ ಹೊಣೆ ಹೊತ್ತು ಪೊಲೀಸರಿಗೆ ಶರಣಾದ ವ್ಯಕ್ತಿ

ABOUT THE AUTHOR

...view details