ಚೆನ್ನೈ(ತಮಿಳುನಾಡು):ಚೆನ್ನೈನ ಸರ್ಕಾರಿ ಕಿಲ್‌ಪಾಕ್ ವೈದ್ಯಕೀಯ ಕಾಲೇಜು (ಕೆಎಂಸಿ) ಆಸ್ಪತ್ರೆಯ ತಜ್ಞ ವೈದ್ಯರು 42 ವರ್ಷದ ಮಹಿಳೆಗೆ ಹೊಂದಾಣಿಕೆಯಾಗದ ರಕ್ತ ಗುಂಪಿನ (ಎಬಿಒ ಇನ್ಕಂಪ್ಯಾಟಿಬಲ್) ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಕೆಎಂಸಿ ಆಸ್ಪತ್ರೆ ಅಧಿಕಾರಿಗಳು ನೀಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ- ಬಿ ಪಾಸಿಟಿವ್ ರಕ್ತದ ಗುಂಪಿನ ಮಹಿಳೆಗೆ ಕಿಡ್ನಿ ಕಸಿ ಮಾಡಲಾಗಿದ್ದು, ಕಿಡ್ನಿ ದಾನಿ ಆಕೆಯ ಪತಿ ಎಬಿ ಪಾಸಿಟಿವ್ ರಕ್ತದ ಗುಂಪನ್ನು ಹೊಂದಿದ್ದರು.
ರೋಗಿಯು ಕೆಎಂಸಿಯಲ್ಲಿ ಜನಿಸಿದ್ದರು ಮತ್ತು ಎಂಟನೇ ವಯಸ್ಸಿನಲ್ಲಿ ಕಿಡ್ನಿಸ್ಟೋನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆಗ ಆಕೆಗೆ ಯಾವುದೇ ಸಮಸ್ಯೆಗಳಾಗಿರಲಿಲ್ಲ. ಇತ್ತೀಚಿನವರೆಗೆ ಆರೋಗ್ಯವಂತಳಾಗಿದ್ದ ಮಹಿಳೆಗೆ 2020 ರ ಸುಮಾರಿಗೆ ಅತಿಯಾದ ಮುಟ್ಟಿನ ರಕ್ತಸ್ರಾವ ಸಮಸ್ಯೆ ಆರಂಭವಾಯಿತು.
ವೈದ್ಯಕೀಯ ಪರೀಕ್ಷೆಯ ನಂತರ ಮಹಿಳೆಗೆ ತೀವ್ರ ಮೂತ್ರಪಿಂಡ ವೈಫಲ್ಯ ಇರುವುದು ಪತ್ತೆಯಾಯಿತು ಮತ್ತು ಅದೇ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಒಳಪಡಿಸಲಾಯಿತು. ಹದಗೆಡುತ್ತಿರುವ ಅವರ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ 46 ವರ್ಷದ ಪತಿ ಆಕೆಗೆ ಮೂತ್ರಪಿಂಡ ಕಸಿ ಮಾಡುವಂತೆ ವೈದ್ಯರಿಗೆ ವಿನಂತಿಸಿದ್ದರು.