ಕರ್ನಾಟಕ

karnataka

ETV Bharat / bharat

ಕಾಳಿಂಗ ಮನುಷ್ಯನನ್ನು ಕಚ್ಚೋದೇ ಅಪರೂಪವಂತೆ: ತಿರುವನಂತಪುರಂ ಜೂ ಕೀಪರ್‌ನ ಕೊಂದಿದ್ದು ಒಂದು ರೋಚಕ ಸ್ಟೋರಿ! - ಕಾಳಿಂಗ ಸರ್ಪ ಕಚ್ಚಿ ವ್ಯಕ್ತಿ ಸಾವು

ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಿಂದ ಕೇರಳದ ತಿರುವನಂತಪುರಂ ಮೃಗಾಲಯಕ್ಕೆ ತರಲಾಗಿದ್ದ ಕಾಳಿಂಗ ಸರ್ಪವೊಂದು ಕಚ್ಚಿ ಮೃಗಾಲಯದ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಸಾಮಾನ್ಯವಾಗಿ ಮನುಷ್ಯನ ಸಹವಾಸ ಮಾಡದ ಕಾಳಿಂಗ ಸರ್ಪ ಈ ಜೂ ಕೀಪರ್‌ನನ್ನು ಕೊಂದಿದ್ದು ಹೇಗೆ? ಎಂಬ ಕಥೆಯೇ ರೋಚಕ.

King Cobra kills zookeeper in Thiruvananthapuram
ಕಾಳಿಂಗ ಸರ್ಪ

By

Published : Jul 5, 2021, 7:52 PM IST

ತಿರುವನಂತಪುರ/ಕೇರಳ:ಮನುಷ್ಯನ ತಂಟೆಗೆ ಅಷ್ಟಾಗಿ ಬಾರದ ಕಾಳಿಂಗ ಸರ್ಪ ತಿರುವನಂತಪುರಂ ಮೃಗಾಲಯದಲ್ಲಿ ಜೂ ಕೀಪರ್‌ನನ್ನು ಕಚ್ಚಿ ಸಾಯಿಸಿದೆ. ಸರೀಸೃಪಗಳು ವಾಸಿಸುವ ಬೋನು ಶುಚಿ​ ಮಾಡುವಾಗ ಅಲ್ಲಿದ್ದ ಕಾಳಿಂಗವೊಂದು ಕಚ್ಚಿ 45 ವರ್ಷದ ಹರ್ಷದ್ ಸ್ಥಳದಲ್ಲೇ​ ಸಾವಿಗೀಡಾಗಿದ್ದಾರೆ. ಈ ವಿಷಪೂರಿತ ಕಾಳಿಂಗ ಸರ್ಪವನ್ನು ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಿಂದ ತಿರುವನಂತಪುರಂಗೆ ತರಲಾಗಿತ್ತು ಎಂದು ತಿಳಿದು ಬಂದಿದೆ.

ಕಾಳಿಂಗ ಸರ್ಪವನ್ನು ಮೊದಲು ಶಿಫ್ಟ್​​ ಬೋನ್​ಗೆ (shift cage) ಕಳುಹಿಸಿ ಆಮೇಲೆ ಸ್ವಚ್ಚತಾ ಕಾರ್ಯ ಆರಂಭಿಸಬೇಕಿತ್ತು. ಆದರೆ ಬೋನು​ ಸ್ವಚ್ಛತಾ​ ಕಾರ್ಯದಲ್ಲಿ ನಿರತರಾಗಿದ್ದ ಹರ್ಷದ್ ಆ ರೀತಿ ಮಾಡಿಲ್ಲ. ಸಿಸಿಟಿವಿ ದೃಶ್ಯಾವಳಿಯಲ್ಲಿರುವ ಪ್ರಕಾರ, ಹರ್ಷದ್​ ಕಾಳಿಂಗ ಸರ್ಪ ಒಳಗಿರುವಾಗಲೇ ಬೋನ್​ ಅನ್ನು ಕ್ಲೀನ್​ ಮಾಡುತ್ತಿದ್ದುದು ಗೊತ್ತಾಗಿದೆ ಎಂದು ಮೃಗಾಲಯ ನಿರ್ದೇಶಕ ಎಸ್​.ಅಬು ತಿಳಿಸಿದ್ದಾರೆ.

ತಿರುವನಂತಪುರಂ ಮೃಗಾಲಯದಲ್ಲಿ ಕಾರ್ತಿಕ್, ನೀಲಾ ಮತ್ತು ನಾಗ ಎಂಬ ಮೂರು ಕಾಳಿಂಗ ಸರ್ಪಗಳಿವೆ. ಅವುಗಳಲ್ಲಿ, ಪಿಲಿಕುಳ ಜೈವಿಕ ಉದ್ಯಾನವನದಿಂದ ತಂದ ಕಾರ್ತಿಕ್ ಹೆಸರಿನ ಸರ್ಪ ಹರ್ಷದ್​ನನ್ನು ಕಚ್ಚಿ ಸಾಯಿಸಿದೆ. ಸಾಮಾನ್ಯವಾಗಿ ಮೃಗಾಲಯದ ಸಿಬ್ಬಂದಿ ಹಾವುಗಳ ಜೊತೆಗೆ ಎಂಥಾ ಸಮಯದಲ್ಲೂ ಬೋನಿನೊಳಗೆ ಇರುವುದಿಲ್ಲ. ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಇದು ಬಹಳ ಮುಖ್ಯ. ಆದರೆ ವರ್ಷಾನುಗಟ್ಟಲೆ ಹಾವುಗಳೊಂದಿಗೆ ಬಾಂಧವ್ಯ ಹೊಂದಿದ್ದ ಹರ್ಷದ್​ ಅವು ಏನೂ ಮಾಡಲಾರವು ಎಂಬ ನಂಬಿಕೆಯಿಂದ ಕಾಳಿಂಗನನ್ನು ಶಿಫ್ಟ್ ಕೇಜ್​ನಲ್ಲಿರಿಸದೇ​ ಬೋನಿನೊಳಗೆ ಇರುವಾಗಲೇ ಶುಚಿಗೊಳಿಸಲು ಹೋಗಿದ್ದಾರೆ. ಪರಿಣಾಮ ಅವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ತಿರುವನಂತಪುರಂನ ಮೃಗಾಲಯ

ಹಾವು ಕಚ್ಚಿದ ನಂತರವೂ ಹರ್ಷದ್ ಬೋನ್​ ಲಾಕ್ ತೆಗೆಯದೇ ಒಳಗೆ ಉಳಿದರು. ಹೀಗಾಗಿ ಕಾಳಿಂಗ ಬೋನಿನೊಳಗೆ ಉಳಿದಿದೆ. ಒಂದು ವೇಳೆ ಅವರು ಲಾಕ್​ ತೆರೆದು ಹೊರ ಬಂದಿದ್ದರೆ ಹಾವು ಸಹ ಹೊರಬಂದು ಹೆಚ್ಚು ಅಪಾಯ ಸೃಷ್ಟಿಸುವ ಸಾಧ್ಯತೆಯೂ ಇತ್ತು ಎಂದು ಮೃಗಾಲಯದ ವೈದ್ಯ ಜಾಕೋಬ್ ಅಲೆಕ್ಸಾಂಡರ್ ಹೇಳುತ್ತಾರೆ. ಹರ್ಷದ್​ಗೆ ಈ ಮೊದಲು ಹೆಬ್ಬಾವು ಕಚ್ಚಿತ್ತಂತೆ. ಆದರೆ ಅದು ವಿಷಕಾರಿ ಹಾವಲ್ಲದ ಕಾರಣ ಹರ್ಷದ್​ ಪ್ರಾಣಾಪಾಯದಿಂದ ಪಾರಾಗಿದ್ದರು.

ಆನೆಯನ್ನೇ ಕೊಲ್ಲಬಲ್ಲದು ಕಾಳಿಂಗ:

ಕಾಳಿಂಗ ಸರ್ಪಗಳಿಗೆ ದೈತ್ಯ ಆನೆಯನ್ನೇ ಕಚ್ಚಿ ಸಾಯಿಸುವಷ್ಟು ಸಾಮರ್ಥ್ಯವಿದೆ. ಆದರೂ ಅವು ಮನುಷ್ಯರ ಕಡೆಗೆ ಮುಖ ಮಾಡುವುದಿಲ್ಲ. ಈ ವಿಷಪೂರಿತ ಕಾಳಿಂಗ ಸರ್ಪಗಳು ಕಾಡಿನಲ್ಲಿಯೇ ಹೆಚ್ಚು ಕಂಡುಬರುವುದರಿಂದ ಮನುಷ್ಯರ ಮೇಲೆ ಅವುಗಳ ಆಕ್ರಮಣ ಕಡಿಮೆ. ಒಂದು ವೇಳೆ ಮನುಷ್ಯರಿಂದ ಅವುಗಳಿಗೆ ತೊಂದರೆಯಾದರೆ ಪೊರೆ, ಉಸಿರು ಬಿಟ್ಟು ಮನುಷ್ಯರನ್ನು ಹೆದರಿಸುತ್ತವೆ ಅಷ್ಟೇ.

ಕಾಳಿಂಗ ಮನುಷ್ಯನನ್ನು ಕೊಂದದ್ದು ಮೊದಲು ಕರ್ನಾಟಕದಲ್ಲೆ!

ಒಂದೂವರೆ ವರ್ಷದ ಹಿಂದೆ ಕರ್ನಾಟಕದಲ್ಲಿ ಹಾವು ಹಿಡಿಯುವ ಉರಗತಜ್ಞನಿಗೆ ಕಾಳಿಂಗ ಸರ್ಪವೊಂದು ಕಚ್ಚಿ ಸಾಯಿಸಿದ್ದು, ದೇಶದಲ್ಲಿ ಕಾಳಿಂಗ ಮನುಷ್ಯನನ್ನು ಕಚ್ಚಿ ಸಾಯಿಸಿದ ಮೊದಲ ಪ್ರಕರಣವಾಗಿತ್ತು. ಇದೀಗ ತಿರುವನಂತಪುರಂನ ಮೃಗಾಲಯದ ಕೀಪರ್ ಹರ್ಷದ್ ಕೋಬ್ರಾ ಕಚ್ಚಿ​ ಸಾವನ್ನಪ್ಪಿರುವುದು ಕೇರಳ ರಾಜ್ಯದಲ್ಲಿ ವರದಿಯಾದ ಮೊದಲ ಪ್ರಕರಣವಾಗಿದೆ.

ಕಚ್ಚಿದ 15 ನಿಮಿಷದಲ್ಲೇ ಸಾವು:

ಕಾಳಿಂಗ ಸರ್ಪ ಸರಾಸರಿ 400 ಮಿಲಿ ಲೀಟರ್​ನಿಂದ 600 ಮಿಲಿ ಲೀಟರ್ ವಿಷವನ್ನು ಹೊರಹಾಕಬಲ್ಲದು. ಇದರ ವಿಷವು ಮಾನವನ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಕಾಳಿಂಗ ಸರ್ಪ ಕಚ್ಚಿದ 15 ನಿಮಿಷಗಳಲ್ಲಿ ವ್ಯಕ್ತಿ ಸಾವನ್ನಪ್ಪುತ್ತಾನೆ.

ABOUT THE AUTHOR

...view details