ಕರ್ನಾಟಕ

karnataka

ETV Bharat / bharat

ಬ್ರಿಟನ್‌ನ ಮೊಟ್ಟ ಮೊದಲ ಹಿಂದೂ ಪ್ರಧಾನಿಯಾಗಿ ರಿಷಿ ಸುನಕ್‌ ಅಧಿಕಾರ ಸ್ವೀಕಾರ!

ಭಾರತ ಮೂಲದ ರಿಷಿ ಸುನಕ್ ಅವರನ್ನು ಕಿಂಗ್ ಚಾರ್ಲ್ಸ್​ -3 ಬ್ರಿಟನ್ ಪ್ರಧಾನಿಯಾಗಿ ನೇಮಕ ಮಾಡಿದ್ದಾರೆ.

ರಿಷಿ ಸುನಕ್‌ ಹಾಗೂ ಕಿಂಗ್ ಚಾರ್ಲ್ಸ್
ರಿಷಿ ಸುನಕ್‌ ಹಾಗೂ ಕಿಂಗ್ ಚಾರ್ಲ್ಸ್

By

Published : Oct 25, 2022, 4:31 PM IST

Updated : Oct 25, 2022, 5:16 PM IST

ಲಂಡನ್: ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದಿಂದ ಬ್ರಿಟನ್ ಪ್ರಧಾನಿಯಾಗಿ ಅವಿರೋಧವಾಗಿ ಆಯ್ಕೆಯಾದ ಭಾರತ ಮೂಲದ ರಿಷಿ ಸುನಕ್ ಅವರನ್ನು ಕಿಂಗ್ ಚಾರ್ಲ್ಸ್​ -3 ಪ್ರಧಾನಿಯಾಗಿ ನೇಮಕ ಮಾಡಿದ್ದಾರೆ. ಈ ಮೂಲಕ ದೀಪಾವಳಿಯಂದೇ ರಿಷಿ ಸುನಕ್ ಹೊಸ ಇತಿಹಾಸ ರಚಿಸಿದರು.

ಸೋಮವಾರ ಫಲಿತಾಂಶ ಪ್ರಕಟವಾದ ಕೂಡಲೇ ಆಡಳಿತಾರೂಢ ಪಕ್ಷದ ನಾಯಕನಾಗಿ ತನ್ನ ಮೊದಲ ಭಾಷಣ ಮಾಡಿದ ಸುನಕ್, ದೇಶ ಒಟ್ಟುಗೂಡಿಸುವುದು ತನ್ನ ಆದ್ಯತೆ. ದೇಶಸೇವೆ ಮಾಡಲು ತನಗೆ ಅವಕಾಶ ಸಿಕ್ಕಿದ್ದಕ್ಕೆ ನಾನು ತುಂಬಾ ಋಣಿಯಾಗಿದ್ದೇನೆ ಎಂದು ಹೇಳಿದ್ದರು.

ಇದೀಗ ನಮ್ಮ ದೇಶವು ಆಳವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಉಕ್ರೇನ್ ಮೇಲೆ ಪುಟಿನ್ ಯುದ್ಧ ಸಾರಿದ್ದರಿಂದ ವಿಶ್ವಾದ್ಯಂತದ ಮಾರುಕಟ್ಟೆಗಳು ಅಸ್ಥಿರವಾಗಿವೆ. ದೇಶದ ಆರ್ಥಿಕ ಗುರಿಗಳನ್ನು ಸಾಧಿಸಲು ಹಿಂದಿನ ಪ್ರಧಾನಿ ಲಿಜ್ ಟ್ರಸ್ ಕೆಲಸ ಮಾಡಿದ್ದು ತಪ್ಪಲ್ಲ. ನಾನು ಅವರ ಪ್ರಯತ್ನಗಳನ್ನು ಶ್ಲಾಘಿಸುತ್ತೇನೆ. ಆದರೂ ಕೆಲ ತಪ್ಪುಗಳಾಗಿವೆ. ನನ್ನ ಮಾತಿನಲ್ಲಿ ಯಾವುದೇ ತಪ್ಪು ಉದ್ದೇಶವಿಲ್ಲ. ವಾಸ್ತವದಲ್ಲಿ ಸದುದ್ದೇಶದಿಂದ ಹೇಳುತ್ತಿದ್ದೇನೆ ಎಂದು ಕಿಂಗ್ ಚಾರ್ಲ್ಸ್ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸುನಕ್ ಹೇಳಿದರು.

ಅಧಿಕಾರದಿಂದ ನಿರ್ಗಮಿಸುತ್ತಿರುವ ಶ್ರೀಮತಿ ಟ್ರಸ್ ಅವರಿಗೆ ಸಕಲವೂ ಶುಭವಾಗಲಿ ಎಂದು ಹಾರೈಸಿದ ಸುನಕ್, ಬ್ರಿಟನ್​ಗೆ ಈ ಹಿಂದೆಂದಿಗಿಂತಲೂ ಹೆಚ್ಚು ಪ್ರಬಲ ಪ್ರಧಾನಿಯ ಅಗತ್ಯವಿದೆ ಎಂಬುದು ಈಗ ಅವರಿಗೆ ಹಿಂದಿಗಿಂತ ಹೆಚ್ಚು ಮನವರಿಕೆಯಾಗಿರಬಹುದು ಎಂದು ನುಡಿದರು.

200 ವರ್ಷಗಳ ಇತಿಹಾಸದಲ್ಲಿ ಬ್ರಿಟನ್​ನ ಅತ್ಯನ್ನತ ಹುದ್ದೆಗೇರಿದ ಅತಿ ಕಿರಿಯ ವಯಸ್ಕರಾಗಿದ್ದಾರೆ ಸುನಕ್. ಅಲ್ಲದೆ ಬ್ರಿಟನ್​ನ ಪ್ರಥಮ ಹಿಂದೂ ಪ್ರಧಾನಿಯೂ ಹೌದು. 49 ದಿನಗಳ ಅಲ್ಪಾವಧಿಯ ಅಧಿಕಾರ ನಡೆಸಿದ ಲಿಜ್ ಟ್ರಸ್ ಅಧಿಕಾರದಿಂದ ನಿರ್ಗಮಿಸಿದ್ದು, ಈ ವರ್ಷವೊಂದರಲ್ಲೇ ಬ್ರಿಟನ್​ ಮೂವರು ಪ್ರಧಾನಿಗಳನ್ನು ಕಂಡಿದೆ.

Last Updated : Oct 25, 2022, 5:16 PM IST

ABOUT THE AUTHOR

...view details