ಶಿವಮೊಗ್ಗ: ಭಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಮಾಡಿರುವ ಆರೋಪಿಗಳು ಹಿಂದೂ ಸಮುದಾಯದ ಬಗ್ಗೆ ದ್ವೇಷ ಬೆಳೆಸಿಕೊಂಡಿದ್ದಾರೆ. ಇದೇ ವಿಚಾರವಾಗಿ ಹರ್ಷನ ವಿರುದ್ಧ ಘೋಷಣೆಗಳನ್ನು ಕೂಗಿ ಹತ್ಯೆ ಮಾಡಿದ್ದಾರೆ ಎಂದು ಎನ್‌ಐಎ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ. ಇತ್ತೀಚೆಗಷ್ಟೇ ವಿಶೇಷ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಚಾರ್ಜ್‌ಶೀಟ್‌ನಲ್ಲಿ ಇರುವುದೇನು?:ಕರ್ನಾಟಕದಲ್ಲಿ ಹಿಜಾಬ್ ಗದ್ದಲ ಜೋರಾಗಿದ್ದ ಸಂದರ್ಭದಲ್ಲೇ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನನ್ನು ಸಾರ್ವಜನಿಕವಾಗಿ ಹತ್ಯೆ ಮಾಡಲಾಗಿತ್ತು. ಈ ವಿಚಾರ ದೇಶಾದ್ಯಂತ ಸದ್ದು ಕೂಡಾ ಮಾಡಿತ್ತು. ಸಿಎಎ - ಎನ್‌ಆರ್‌ಸಿ ಸಮಸ್ಯೆ, ಹಿಜಾಬ್ ವಿವಾದ ಮತ್ತು ಬಜರಂಗದಳದ ಕಾರ್ಯಕರ್ತರ ಗೋಸಂರಕ್ಷಣಾ ಚಟುವಟಿಕೆಗಳ ವಿಚಾರವಾಗಿ ಆರೋಪಿಗಳು ಹಿಂದೂ ಸಮುದಾಯದ ಬಗ್ಗೆ ದ್ವೇಷವನ್ನು ಬೆಳೆಸಿಕೊಂಡಿದ್ದರು ಎಂದು ಎನ್‌ಐಎ ನಡೆಸಿರುವ ತನಿಖೆಯಿಂದ ತಿಳಿದುಬಂದಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ.
ದೇಶ ಮತ್ತು ರಾಜ್ಯದಲ್ಲಿ ನಡೆದ ಕೆಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಿಂದೂ ಸಮುದಾಯದ ಮೇಲೆ ಈ ಆರೋಪಿಗಳು ಗರಂ ಆಗಿದ್ದರು. ಶಿವಮೊಗ್ಗ ನಗರದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರ ನಡುವೆ ಕೋಮು ದಳ್ಳುರಿ, ದ್ವೇಷ ಮತ್ತು ದ್ವೇಷ ಹುಟ್ಟುಹಾಕಲು ಸಂಚು ರೂಪಿಸಿದ್ದರು ಎಂದು ಎನ್‌ಐಎ ತನಿಖೆ ವೇಳೆ ಕಂಡು ಬಂದಿದೆ.