ಬೆಂಗಳೂರು: ಸಂಬಳ ಕೊಟ್ಟಿಲ್ಲವೆಂದು ಅಸಮಾಧಾನಗೊಂಡು ಕುಡಿದ ನಶೆಯಲ್ಲಿ ಗಾರೆ ಮೇಸ್ತ್ರಿಯನ್ನು ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೇಸ್ತ್ರಿಯನ್ನು ಕಬ್ಬಿಣದ ರಾಡ್ನಿಂದ ಹೊಡೆದು ಹತ್ಯೆ ಮಾಡಿ ನೇಪಾಳದ ಗಡಿಪ್ರದೇಶ ಡಾರ್ಜಿಲಿಂಗ್ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಟ್ಟಡ ಕಾಂಟ್ರಾಕ್ಟರ್ ಆಗಿದ್ದ ಐನಲ್ ಹಕ್ ಎಂಬುವರೇ ಹತ್ಯೆಗೀಡಾದ ದುರ್ದೈವಿ. ಹತ್ಯೆ ಆರೋಪಿ ಪಶ್ಚಿಮ ಬಂಗಾಳ ಮೂಲದ ಪ್ರಿಯೋನಾಥ್ ಎಂಬಾತನನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
ಕಳೆದ ಐದಾರು ವರ್ಷಗಳಿಂದ ಐನಲ್ ಹಕ್ ನಗರದ ಮಹದೇವಪುರದಲ್ಲಿ ವಾಸವಾಗಿದ್ದ. ವಿದ್ಯಾವಂತನಾಗಿದ್ದ ಈತ ಗಾರೆ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಯಲಹಂಕ ನ್ಯೂ ಟೌನ್ ಠಾಣಾ ವ್ಯಾಪ್ತಿಯ ಪ್ರಕೃತಿ ಲೇಔಟ್ನಲ್ಲಿ ಭೂಮಿ ವೆಂಚರ್ಸ್ ಡೆವಲಪರ್ಸ್ ವತಿಯಿಂದ ಕಟ್ಟಿಸಲಾಗುತ್ತಿದ್ದ ಅಪಾರ್ಟಮೆಂಟ್ಗೆ ಪ್ಲಾಸ್ಟರಿಂಗ್ ಮಾಡುವ ಗುತ್ತಿಗೆ ಒಪ್ಪಿಕೊಂಡಿದ್ದ. ಇದಕ್ಕಾಗಿ ಹುಡುಗರನ್ನು ಕರೆಯಿಸಿ ಕೆಲಸ ಮಾಡಿಸುತ್ತಿದ್ದ.
ಕುಡಿದ ಮತ್ತಿನಲ್ಲಿ ಗಲಾಟೆ, ಥಳಿತ:ಇದೇ ಗುಂಪಿನಲ್ಲಿ ಆರೋಪಿ ಪ್ರಿಯೋನಾಥ್ ಓರ್ವನಾಗಿದ್ದ. ವಾರಕ್ಕೊಮ್ಮೆ ಐನಲ್ ಕಾರ್ಮಿಕರ ವೇತನ ನೀಡುತ್ತಿದ್ದ. ಎಂದಿನಂತೆ ಕಳೆದ ಡಿಸೆಂಬರ್ 18ರಂದು ಕಾರ್ಮಿಕರಿರುವ ಶೆಡ್ಗೆ ಐನಲ್ ಹಕ್ ಬಂದಿದ್ದ. ಪ್ರಿಯೋನಾಥ್ಗೆ ಸುಮಾರು 32 ಸಾವಿರ ರೂಪಾಯಿ ಕೊಡಬೇಕಾಗಿದ್ದು, ಈ ಹಣವನ್ನು ನಾಳೆ ಕೊಡುವುದಾಗಿ ಹೇಳಿದ್ದ. ಈ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿದ್ದ ಆರೋಪಿ ಮೇಸ್ತ್ರಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದಾನೆ. ನೋಡು ನೋಡುತ್ತಿದ್ದಂತೆ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ, ಕಬ್ಬಿಣದ ರಾಡ್ನಿಂದ ಪ್ರಿಯೋನಾಥ್ ಐನಲ್ಗೆ ಬಲವಾಗಿ ಹೊಡೆದಿದ್ದು, ಐನಲ್ ಹಕ್ ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ.