ಪುಣೆ(ಮಹಾರಾಷ್ಟ್ರ) :ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸೇರಿದಂತೆ, ದೇಶಾದ್ಯಂತ ಸರಣಿ ಬಾಂಬ್ ಸ್ಫೋಟದ ಬೆದರಿಕೆ ಕರೆ, ಪತ್ರಗಳ ಸರಣಿ ಮುಂದುವರಿದಿದೆ. ಬುಧವಾರ ಕೂಡ ಮತ್ತೊಂದು ಬೆದರಿಕೆ ಪತ್ರ ರವಾನಿಸಲಾಗಿದೆ. ವಿಶೇಷ ಎಂದರೆ ಅದು ವಿದೇಶದಿಂದ ಬಂದಿದೆ. ಅದರಲ್ಲಿ ಮೋದಿ ಹತ್ಯೆ ಮಾಡಿ, ವಿವಿಧೆಡೆ ಸ್ಫೋಟಕ್ಕೆ ಸಂಚು ರೂಪಿಸಿದ ಬಗ್ಗೆ ಮಾಹಿತಿ ನೀಡಲಾಗಿದೆ.
ಪುಣೆಯ ದೀನಾನಾಥ್ ಆಸ್ಪತ್ರೆಯ ವ್ಯಕ್ತಿಯೊಬ್ಬರಿಗೆ ಈ ಇಮೇಲ್ ಬಂದಿದೆ. ತಕ್ಷಣವೇ ಅವರು ನಗರ ಪೊಲೀಸ್ ಪಡೆಯ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಮೋಖಿಮ್ ಎಂಬ ಹೆಸರಿನಲ್ಲಿ ಈ ಬೆದರಿಕೆ ಇಮೇಲ್ ಕಳುಹಿಸಲಾಗಿದೆ. ಅದು ಎಲ್ಲಿಂದ ಬಂತು ಎಂಬ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪತ್ರದಲ್ಲಿ ಏನಿದೆ?:ನಾನು ಹಲವಾರು ಭಯೋತ್ಪಾದಕ ಸಂಘಟನೆಗಳಿಗೆ ಧನಸಹಾಯ ಮಾಡುತ್ತಿದ್ದೇನೆ. ಕೆಲ ಧರ್ಮಗಳ ಜನರನ್ನು ದೇಶದಿಂದ ನಿರ್ನಾಮ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಇದ್ದಾರೆ. ಭಾರತದ ವಿವಿಧೆಡೆ ಬಾಂಬ್ ಸ್ಫೋಟಗಳನ್ನು ನಡೆಸಲಾಗುವುದು ಎಂದು ಆ ಮೇಲ್ನಲ್ಲಿ ಬರೆಯಲಾಗಿದೆ.
ಸಚಿವಾಲಯಕ್ಕೆ ಬೆದರಿಕೆ:ಮುಂಬೈಯಲ್ಲಿನ ಸಚಿವಾಲಯದಲ್ಲಿ ಬಾಂಬ್ ಇಟ್ಟಿರುವುದಾಗಿ ವ್ಯಕ್ತಿಯೊಬ್ಬ ಸೋಮವಾರ ರಾತ್ರಿ 10 ಗಂಟೆಗೆ ಕರೆ ಮಾಡಿ ಮಾಹಿತಿ ನೀಡಿದ್ದ. ತಕ್ಷಣವೇ ಪೊಲೀಸರಿಗೆ ಮಾಹಿತಿ ಸಿಕ್ಕ ಬಳಿಕ ಕಾರ್ಯಾಚರಣೆ ನಡೆಸಲಾಗಿದ್ದು, 61 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು.
ಪ್ರಕಾಶ್ ಖೇಮಾನಿ ಬಂಧಿತ ಆರೋಪಿ. ಸಚಿವಾಲಯಗಳ ಸಂಕೀರ್ಣದ ಪ್ರಧಾನ ಕಚೇರಿಗೆ ಕರೆ ಮಾಡಿದ ವ್ಯಕ್ತಿ, ಕಟ್ಟಡದಲ್ಲಿ ಬಾಂಬ್ ಇಡಲಾಗಿದೆ. ಭಯೋತ್ಪಾದಕ ದಾಳಿ ನಡೆಯಲಿದೆ ಎಂದು ಹೇಳಿದ್ದ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದಾಗ ಯಾವುದೇ ಬಾಂಬ್ ಮತ್ತಿತರ ವಸ್ತುಗಳು ಸಿಕ್ಕಿರಲಿಲ್ಲ. ಇದರಿಂದ ಇದೊಂದು ಹುಸಿ ಕರೆಯಾಗಿದೆ ಎಂದು ಪೊಲೀಸರು ಖಚಿತವಾಗಿತ್ತು.
ಸರಣಿ ಬಾಂಬ್ ಸ್ಫೋಟ ಎಚ್ಚರಿಕೆ:ಸ್ಥಳೀಯ ರೈಲುಗಳಲ್ಲಿ ಸರಣಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ಅಶೋಕ್ ಮುಖಿಯಾ ಎಂದು ಗುರುತಿಸಲಾಗಿತ್ತು. ಆರೋಪಿ ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಲೋಕಲ್ ಟ್ರೈನ್ಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದ. ಆತಂಕದ ವಾತಾವರಣ ಉಂಟಾದ ಬಳಿಕ ತಕ್ಷಣವೇ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆಗೆ ಇಳಿದು, ಇದೊಂದು ಹುಸಿ ಕರೆ ಎಂದು ಖಚಿತವಾದ ಬಳಿಕ ಆರೋಪಿಯನ್ನು ಬಂಧಿಸಿದ್ದರು.
ಇದನ್ನೂ ಓದಿ:Threat call: ಮುಂಬೈ ಪೊಲೀಸರಿಗೆ ಮತ್ತೊಂದು ಬೆದರಿಕೆ ಕರೆ.. ಲೋಕಲ್ ಟ್ರೈನ್ ಸರಣಿ ಸ್ಫೋಟದ ಕರೆ ಮಾಡಿದವ ಅರೆಸ್ಟ್