ಘಾಟ್ಶಿಲಾ(ಜಾರ್ಖಂಡ್):ಬಡತದಲ್ಲಿ ಹುಟ್ಟಿದ ಮಕ್ಕಳಿಗೆ ಓದುವ ಆಸೆ. ಹೇಗಾದ್ರೂ ಮಾಡಿ ಆನ್‌ಲೈನ್ ಶಿಕ್ಷಣ ಕಲಿಯಬೇಕೆಂದು ಪಣತೊಟ್ಟ ಮಕ್ಕಳು ಕಾಡಿನಿಂದ ಮಾವಿನ ಹಣ್ಣು ಕಿತ್ತು ಮಾರಾಟ ಮಾಡುತ್ತಿರುವ ಘಟನೆ ಜಾದುಗೋಡ ಗ್ರಾಮದಲ್ಲಿ ಕಂಡು ಬಂದಿದೆ.
ಕೋವಿಡ್ ಸಮಯದಲ್ಲಿ ಜಾದುಗೋಡ ಗ್ರಾಮದ ಮಕ್ಕಳ ಗುಂಪೊಂದು ಸಮೀಪದ ಕಾಡಿನಲ್ಲಿ ಮಾವಿನ ಹಣ್ಣುಗಳನ್ನು ಕಿತ್ತು ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಮಕ್ಕಳ ತಂದೆ-ತಾಯಿ ಒಪ್ಪೊತ್ತಿನ ಊಟಕ್ಕಾಗಿ ಕಷ್ಟಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ಆನ್‌ಲೈನ್ ಶಿಕ್ಷಣಕ್ಕಾಗಿ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಡಿಸುವ ಶಕ್ತಿ ಅವರ ಬಳಿ ಇಲ್ಲ. ಇದನ್ನರಿತ ಮಕ್ಕಳು ತಾವೇ ಕಾಡಿಗೆ ಹೋಗಿ ಮಾವಿನ ಹಣ್ಣುಗಳನ್ನು ತಂದು ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಆನ್‌ಲೈನ್ ಶಿಕ್ಷಣಕ್ಕಾಗಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿರುವ ಮಕ್ಕಳು 'ಕಾಡಿನಿಂದ ಮಾವಿನ ಹಣ್ಣುಗಳನ್ನು ತಂದು ಪ್ರತಿ ಕೆ.ಜಿ.ಗೆ 30 ರೂ.ಗೆ ಮಾರಾಟ ಮಾಡುತ್ತಿದ್ದೇನೆ. ದಿನಕ್ಕೆ ಸುಮಾರು 150 ರಿಂದ 200 ರೂಪಾಯಿ ಸಿಗುತ್ತಿದೆ' ಎಂದು ಬಾಲಕ ರಾಮು ಹೆಂಬ್ರಾಮ್ ಹೇಳುತ್ತಾನೆ.
'ಕೋವಿಡ್ ಸಮಯದಲ್ಲಿ ಎಲ್ಲ ಶಾಲೆಗಳು ಬಂದ್ ಆಗಿವೆ. ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣ ಮುಂದುವರಿಸುತ್ತಿದ್ದಾರೆ. ಸ್ಮಾರ್ಟ್ ಫೋನ್ ಹೊಂದಿಲ್ಲದ ಕಾರಣ ನಮಗೆ ಶಿಕ್ಷಣ ಮುಂದುವರಿಸಲು ಸಾಧ್ಯವಿಲ್ಲ. ಹೀಗಾಗಿ ಮೊಬೈಲ್‌ಗಳನ್ನು ಖರೀದಿಸಲು ಮಾವಿನಹಣ್ಣಗಳನ್ನು ಮಾರಾಟ ಮಾಡುತ್ತಿದ್ದೇವೆ. ಬಂದ ಹಣದ ಮೂಲಕ ನಾವು ಮೊಬೈಲ್ ಖರೀದಿಸುತ್ತೇವೆ' ಎಂದು ರಾಮು ವಿವರಿಸುತ್ತಾನೆ.
'ನಾವು ಬಡವರು, ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಮಕ್ಕಳಿಗೆ ಆನ್‌ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಖರೀದಿಸುವ ಶಕ್ತಿ ನಮ್ಮಲ್ಲಿಲ್ಲ. ಮಕ್ಕಳೇ ಇದನ್ನರಿತು ಕಾಡಿಗೆ ಹೋಗಿ ಮಾವಿನಹಣ್ಣುಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಮಾರಾಟ ಮಾಡಿದ ಹಣವನ್ನು ಸಂಗ್ರಹಿಸಿ ಮೊಬೈಲ್ ಖರೀದಿಸುತ್ತಾರೆ' ಎಂದು ರಾಮುವಿನ ತಂದೆ ಯಶ್ವಂತ್ ಹೆಂಬ್ರಾಮ್ ಹೇಳಿದರು.