ನವದೆಹಲಿ: ಹುವಾಜ್ ಖಾಸ್‌ನಲ್ಲಿ ಅಕ್ರಮ ಮೂತ್ರಪಿಂಡ ಕಸಿಯಲ್ಲಿ ತೊಡಗಿಸಿಕೊಂಡಿದ್ದ ಆರೋಪದ ಮೇಲೆ 10 ಜನರನ್ನು ಬಂಧಿಸಲಾಗಿದೆ. ಈ ಮೂಲಕ ದೊಡ್ಡ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಈ ಗ್ಯಾಂಗ್‌ನ ಸದಸ್ಯರು ಹಣದ ಅವಶ್ಯಕತೆ ಇರುವ 20 ರಿಂದ 30 ವರ್ಷ ವಯಸ್ಸಿನ ಯುವಕರನ್ನು ಗುರಿಯಾಗಿಸಿಕೊಂಡು ಅವರ ಕಿಡ್ನಿ ಮಾರಾಟಕ್ಕೆ ಮನವರಿಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇಲ್ಲಿಯವರೆಗೆ 20 ಕ್ಕೂ ಹೆಚ್ಚು ಮೂತ್ರಪಿಂಡಗಳನ್ನು ಕಸಿ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೇ 26 ರಂದು ಹೌಜ್ ಖಾಸ್ ಪೊಲೀಸ್ ಠಾಣೆಗೆ ಅಕ್ರಮ ಕಿಡ್ನಿ ಕಸಿ ದಂಧೆ ನಡೆಯುತ್ತಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಆಪರೇಟಿಂಗ್ ಥಿಯೇಟರ್ ತಂತ್ರಜ್ಞ ಕುಲದೀಪ್ ರೇ ವಿಶ್ವಕರ್ಮ (46) ಗ್ಯಾಂಗ್‌ನ ಕಿಂಗ್‌ಪಿನ್ ಆಗಿದ್ದು, ಸೋನಿಪತ್‌ನ ಗುಹಾನಾದಲ್ಲಿರುವ ಡಾ ಸೋನು ರೋಹಿಲ್ಲಾ ಅವರ ಕ್ಲಿನಿಕ್‌ನಲ್ಲಿ ಈ ಕೆಲಸ ಮಾಡುತ್ತಿದ್ದರು.
ವಿಶ್ವಕರ್ಮ ಪ್ರತಿಯೊಬ್ಬ ಗ್ಯಾಂಗ್‌ನ ಸದಸ್ಯರಿಗೂ ಅವರವರ ಪಾತ್ರಗಳಿಗೆ ಅನುಗುಣವಾಗಿ ವೇತನ ನೀಡುತ್ತಿದ್ದ. ಇನ್ನು ಗುಹಾನಾ ಚಿಕಿತ್ಸಾಲಯದಲ್ಲಿ ಕಳೆದ ಆರು - ಏಳು ತಿಂಗಳ ಅವಧಿಯಲ್ಲಿ 12-14 ಅಕ್ರಮ ಕಸಿಗಳನ್ನು ಮಾಡಿದ್ದಾರೆ ಎಂದು ತಿಳಿದು ಬಂದಿದೆ.