ಬಾಗಪತ್(ಉತ್ತರಪ್ರದೇಶ) :ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆಯೋರ್ವಳು ಕೋರ್ಟ್ನಲ್ಲಿ ಹೇಳಿಕೆ ನೀಡಲು ಬರುತ್ತಿದ್ದ ಸಂದರ್ಭದಲ್ಲಿ ಅಪಹರಣ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದೀಗ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಶೋಧಕಾರ್ಯ ಆರಂಭಿಸಿದ್ದಾರೆ.
ಕಳೆದ ಸೋಮವಾರ ಯುವತಿಯೋರ್ವಳ ಮೇಲೆ ದುಷ್ಕರ್ಮಿಗಳ ಗುಂಪೊಂದು ಅತ್ಯಾಚಾರವೆಸಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ವಿಚಾರಣೆ ನಡೆಸಿದ್ದ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು.
ಹೀಗಾಗಿ, ಕೋರ್ಟ್ನಲ್ಲಿ ಸಂತ್ರಸ್ತೆ ಹೇಳಿಕೆ ನೀಡುವುದು ಅನಿವಾರ್ಯವಾಗಿತ್ತು. ಅದೇ ಕಾರಣದಿಂದಾಗಿ ಇಂದು ಬೆಳಗ್ಗೆ ಮಹಿಳಾ ಕಾನ್ಸ್ಟೇಬಲ್ ಜೊತೆ ಇ-ರಿಕ್ಷಾದಲ್ಲಿ ಜಿಲ್ಲಾ ಕೋರ್ಟ್ಗೆ ಆಗಮಿಸಿ ಕೆಳಗಿಳಿಯುತ್ತಿದ್ದಂತೆ ಕಾರಿನಲ್ಲಿ ಬಂದ ನಾಲ್ವರು ಆಕೆಯನ್ನ ಅಪಹರಿಸಿದ್ದಾರೆ.
ಇದನ್ನೂ ಓದಿರಿ:ಬ್ರಾಹ್ಮಣರ ವಿರುದ್ಧ ವಿವಾದಿತ ಹೇಳಿಕೆ: ಛತ್ತೀಸ್ಗಢ ಸಿಎಂ ಬಘೇಲ್ ಅವರ ತಂದೆಗೆ 15 ದಿನಗಳ ನ್ಯಾಯಾಂಗ ಬಂಧನ
ಕೋರ್ಟ್ ಆವರಣದಿಂದಲೇ ದುಷ್ಕರ್ಮಿಗಳು ಗುಂಪು ಯುವತಿಯ ಅಪಹರಣ ಮಾಡಿರುವುದು ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಸ್ಥಳದಲ್ಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದು, ಕುಟುಂಬಸ್ಥರಿಂದ ಮಾಹಿತಿ ಸಹ ಕಲೆ ಹಾಕುತ್ತಿದ್ದಾರೆ.