ಚೆನ್ನೈ :ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ನೇಮಕಗೊಂಡ ಬಹುಭಾಷಾ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರು ತಾವು ಬಾಲ್ಯದಲ್ಲಿ ಅನುಭವಿಸಿದ ನೋವನ್ನು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೊರಹಾಕಿದ್ದಾರೆ. "ನಾನು ತಂದೆಯಿಂದಲೇ ಲೈಂಗಿಕ ಮತ್ತು ದೈಹಿಕವಾಗಿ ಕಿರುಕುಳಕ್ಕೊಳಗಾಗಿದ್ದೆ. ನನಗೆ ಆಗ 8 ವರ್ಷ ವಯಸ್ಸಾಗಿತ್ತು. ಒಂದು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಳಿಕ ಆ ಗಾಯದ ಗುರುತು ಜೀವನ ಪರ್ಯಂತ ಉಳಿಯುತ್ತದೆ. ಮಗು ಗಂಡೋ ಅಥವಾ ಹೆಣ್ಣೋ ಎಂಬುದಿಲ್ಲಿ ಮುಖ್ಯವಲ್ಲ" ಎಂದು ಹೇಳಿದ್ದಾರೆ.
"ನನ್ನ ತಾಯಿ ಅತ್ಯಂತ ಅಸಹನೀಯ ದಾಂಪತ್ಯ ಜೀವನ ಅನುಭವಿಸಿದ್ದರು. ಹೆಂಡತಿ ಮತ್ತು ಮಕ್ಕಳಿಗೆ ಹೊಡೆಯುವುದು ಹಾಗು ತನ್ನದೇ ಏಕೈಕ ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳುವುದನ್ನು ನನ್ನ ತಂದೆ ಜನ್ಮಸಿದ್ಧ ಹಕ್ಕು ಎಂದು ಭಾವಿಸಿದ್ದರು. ನನ್ನ ಮೇಲೆ ನಡೆದ ದೌರ್ಜನ್ಯದ ನೋವು ನನ್ನನ್ನೂ ಕಾಡುತ್ತಲೇ ಇತ್ತು. ನನಗೆ 15 ವರ್ಷ ತುಂಬಿದಾಗ ತಂದೆ ನಡೆಸಿದ ದೌರ್ಜನ್ಯ, ನಿಂದನೆಯ ವಿರುದ್ಧ ಮಾತನಾಡುವ ಧೈರ್ಯ ಮಾಡಿದೆ" ಎಂದು ಖುಷ್ಬೂ ವಿವರಿಸಿದರು.
"8ನೇ ವಯಸ್ಸಿನಲ್ಲಿದ್ದಾಗಲೇ ನನಗೆ ಸರಿಯಾದ ನಿಲುವು ತೆಗೆದುಕೊಳ್ಳುವ ಪಕ್ವತೆ ಬೆಳೆದಿತ್ತು. ಆದರೆ ಕುಟುಂಬದ ಇತರರು ನನ್ನಿಂದ ನೋವು ಅನುಭವಿಸುತ್ತಾರೆ ಎಂಬ ಭಯ ಕಾಡುತ್ತಿತ್ತು. ಇದು ನನ್ನ ಹಲವು ವರ್ಷಗಳವರೆಗೆ ನನ್ನ ಬಾಯಿ ಮುಚ್ಚಿಸಿತ್ತು" ಎಂದು ಅವರು ತಿಳಿಸಿದರು. ಇದೇ ವೇಳೆ ತಾಯಿಯ ಬಗ್ಗೆ ಮಾತನಾಡುತ್ತಾ, "ತಾಯಿ ನನ್ನ ಮಾತು ನಂಬುತ್ತಿರಲಿಲ್ಲ. ಅವರಂತೂ ಕುಚ್ ಭಿ ಹೋತಾ ಹೈ, ಮೇರಿ ಪತಿ ದೇವತಾ ಹೈ ಎಂಬ ಮನಸ್ಥಿತಿಯಲ್ಲಿದ್ದರು" ಎಂದರು.