ಹಿಸಾರ್(ಹರಿಯಾಣ):ಹರಿಯಾಣದ ಕೇದಾರ್ ಥರ್ಮಲ್ ಪವರ್ ಪ್ಲಾಂಟ್ ಬೂದಿ ವಿಚಾರವಾಗಿ ಪೊಲೀಸರು - ಪ್ರತಿಭಟನಾಕಾರರ ಮಧ್ಯೆ ಘರ್ಷಣೆ ಉಂಟಾಗಿದ್ದು, ಓರ್ವ ರೈತ ಪ್ರಾಣ ಕಳೆದುಕೊಂಡಿದ್ದಾರೆ. ಉಳಿದಂತೆ ಅನೇಕ ಪೊಲೀಸರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಹಿಸಾರ್ನ ಕೇದಾರ್ ಗ್ರಾಮದಲ್ಲಿ ನಿರ್ಮಿಸಲಾಗಿರುವ ಉಷ್ಣ ವಿದ್ಯುತ್ ಸ್ಥಾವರದ ಚಿತಾಭಸ್ಮದ ವಿಚಾರವಾಗಿ ವಿವಾದ ಉಂಟಾಗಿ ಹಿಂಸಾಚಾರ ನಡೆದಿದೆ.
ಪ್ರತಿಭಟನಾ ನಿರತ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದ್ದು, ಈ ವೇಳೆ ಕೇದರ್ನ ಓರ್ವ ರೈತ ಸಾವನ್ನಪ್ಪಿದ್ದು, ಪೊಲೀಸ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರು ನಿರ್ಮಿಸಿದ್ದ ಬ್ಯಾರಿಕೇಡ್ ಮುರಿದು ಪ್ರತಿಭಟನಾಕಾರರು ಟ್ರ್ಯಾಕ್ಟರ್ ಮೂಲಕ ನುಗ್ಗಿದ್ದು, ಈ ವೇಳೆ ಅದು ಡಿಕ್ಕಿ ಹೊಡೆದು ಪೊಲೀಸರು ಹಾಗೂ ಗ್ರಾಮಸ್ಥರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಓರ್ವ ಪೊಲೀಸ್ನ ಸ್ಥಿತಿ ಚಿಂತಾಜನಕವಾಗಿದೆ. ಕೇದಾರ್ ಗ್ರಾಮದ ರಾಜೀವ್ ಗಾಂಧಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದ ಹೊರಬರುತ್ತಿರುವ ಬೂದಿ ವಿಚಾರವಾಗಿ ಈ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ತಡೆಯಲು ಪೊಲೀಸರು ಲಾಠಿ ಚಾರ್ಜ್, ಜಲಫಿರಂಗಿ ಪ್ರಯೋಗಿಸಿದ್ದಾರೆ.