ನವದೆಹಲಿ:ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಗದ್ದಲದ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಆಗಸ್ಟ್ 1 ರಿಂದ 129 ಸದಸ್ಯರನ್ನು ಲೋಕಸಭೆಗೆ ಕಳುಹಿಸುವ ದಕ್ಷಿಣ ಭಾರತದ ಕರ್ನಾಟಕ ಸೇರಿ ಐದು ರಾಜ್ಯಗಳಲ್ಲಿನ ಪಕ್ಷದ ಸಿದ್ಧತೆಗಳನ್ನು ಖರ್ಗೆ ಅವಲೋಕನ ಮಾಡಲಿದ್ದಾರೆ.
ಇದನ್ನೂ ಓದಿ:ಭಿನ್ನಮತ ಶಮನಕ್ಕೆ ಮುಂದಾದ ಹೈಕಮಾಂಡ್: ಆಗಸ್ಟ್ 2 ರಂದು ದೆಹಲಿಯಲ್ಲಿ ರಾಜ್ಯ ಕೈ ನಾಯಕರೊಂದಿಗೆ ಸಭೆ
2024ರ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಮಲ್ಲಿಕಾರ್ಜನ ಖರ್ಗೆ ಅವರು ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಆಯಾ ರಾಜ್ಯಗಳ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಆಗಸ್ಟ್ 1ರಂದು ಕೇರಳ ನಾಯಕರೊಂದಿಗೆ ಖರ್ಗೆ ಸಮಲೋಚನೆ ಮಾಡಲಿದ್ದಾರೆ. ಆಗಸ್ಟ್ 2ರಂದು ಕರ್ನಾಟಕ ಮತ್ತು ಆಗಸ್ಟ್ 3ರಂದು ತಮಿಳುನಾಡು ಎಐಸಿಸಿ ಮತ್ತು ರಾಜ್ಯ ತಂಡಗಳೊಂದಿಗೆ ಚುನಾವಣಾ ಕಾರ್ಯತಂತ್ರದ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ತೆಲಂಗಾಣ, ಆಂಧ್ರಪ್ರದೇಶ ನಾಯಕರಿಗೂ ಆಹ್ವಾನ ನೀಡಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದೆ. ದೊಡ್ಡ ಮಟ್ಟದ ಗೆಲುವಿನ ಮೂಲಕ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚುವಂತೆ ಮಾಡಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾನ ಗೆಲ್ಲುವತ್ತ ಗಮನ ಹರಿಸಲಾಗಿದೆ. ಕರ್ನಾಟಕ ಚುನಾವಣೆಯ ನಂತರ ಖರ್ಗೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರನ್ನು ಉಪ ಮುಖ್ಯಮಂತ್ರಿ ಎಂದು ನೇಮಕ ಮಾಡಿದ್ದಾರೆ. ಜೊತೆಗೆ, 2024ರಲ್ಲಿ ರಾಜ್ಯದಲ್ಲಿ ಹೆಚ್ಚಿನ ಸಂಸತ್ತಿನ ಸ್ಥಾನಗಳಲ್ಲಿ ಗೆಲುವು ಖಾತ್ರಿಪಡಿಸುವ ಜವಾಬ್ದಾರಿಯನ್ನು ಡಿಕೆ ಶಿವಕುಮಾರ್ ಅವರಿಗೆ ವಹಿಸಿದ್ದಾರೆ.
ಇದನ್ನೂ ಓದಿ:ದೇಶದಲ್ಲಿ 'ಕೈ' ಬಲವರ್ಧನೆಗೆ ಖರ್ಗೆ ರಣತಂತ್ರ: ಪಕ್ಷ, ಪ್ರತಿಪಕ್ಷಗಳ ಒಗ್ಗಟ್ಟಿಗೆ ಏಕಕಾಲದಲ್ಲಿ ರೂಪುರೇಷೆ
ಕರ್ನಾಟಕವು ಲೋಕಸಭೆಗೆ 28 ಸದಸ್ಯರನ್ನು ಕಳುಹಿಸುತ್ತದೆ. ಈ ಪೈಕಿ ಕಳೆದ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿದ್ದರೆ, ತಲಾ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಸ್ವತಂತ್ರ ಅಭ್ಯರ್ಥಿ ಜಯ ದಾಖಲಿಸಿದ್ದಾರೆ. ಈ ಬಾರಿ ನಾವು ಎಲ್ಲ 28 ಸ್ಥಾನಗಳನ್ನು ಗೆಲ್ಲಲು ಬಯಸುತ್ತೇವೆ. ಅದಕ್ಕೆ ಬೇಕಾದ ಕಾರ್ಯತಂತ್ರಗಳನ್ನು ಸಮಯಕ್ಕೆ ತಕ್ಕಂತೆ ರೂಪಿಸಲಾಗುವುದು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ವಿಧಾನಸಭೆ ಚುನಾವಣೆಯಲ್ಲಿ ಚಿತ್ರಣವನ್ನೇ ಬದಲಾಯಿಸಿದೆ. ಅಲ್ಲದೇ, ಈ ಯೋಜನೆಗಳು ಸುಗಮವಾಗಿ ಜಾರಿಯಾಗಲು ಪ್ರಾರಂಭಿಸಿದ ನಂತರ ಮತದಾರರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಎಐಸಿಸಿ ಕರ್ನಾಟಕ ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ ಹೇಳಿದ್ದಾರೆ.
ದಕ್ಷಿಣ ಭಾರತದಲ್ಲಿ ಪ್ರಬಲ ಸಂದೇಶವನ್ನು ರವಾನಿಸಲೆಂದೇ ಜುಲೈ 18ರಂದು ಪ್ರತಿಪಕ್ಷಗಳ ಎರಡನೇ ಸಭೆವಾಗಿ ಬೆಂಗಳೂರನ್ನು ಆಯ್ಕೆ ಮಾಡಲಾಗಿತ್ತು. ಕಾಂಗ್ರೆಸ್‌ಗೆ ಕರ್ನಾಟಕವು ಗೆಲುವಿನ ರುಚಿ ನೀಡಿದ್ದರೆ, ಕೇರಳವು ಅತ್ಯಂತ ಭರವಸೆಯ ರಾಜ್ಯವಾಗಿದೆ. ಯಾಕೆಂದರೆ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇರಳದ 20 ಸ್ಥಾನಗಳ ಪೈಕಿ ಕಾಂಗ್ರೆಸ್ ಮೈತ್ರಿಕೂಟ 19 ಸ್ಥಾನಗಳನ್ನು ಗೆದ್ದಿತ್ತು. ವಯನಾಡಿನಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ದಾಖಲೆಯ ಅಂತರದಿಂದ ಗೆದ್ದಿದ್ದರು. ಕಳೆದ ವರ್ಷ ರಾಹುಲ್ ಅವರ ಭಾರತ್ ಜೋಡೋ ಯಾತ್ರೆಗೂ ಕೇರಳದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೆಂಗಳೂರಿನಲ್ಲಿ ನಡೆದ ಪ್ರತಿಪಕ್ಷಗಳ ಸಭೆ ಸಂದರ್ಭದಲ್ಲೇ ನಿಧನರಾದ ಪಕ್ಷದ ಹಿರಿಯ ಉಮ್ಮನ್ ಚಾಂಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಹುಲ್ ರಾಜ್ಯಕ್ಕೆ ತೆರಳಿದ್ದರು. ನಾವು ಮುಂದಿನ ವರ್ಷ ಕೂಡ 2019ರ ಫಲಿತಾಂಶವನ್ನು ಪುನರಾವರ್ತಿಸುತ್ತೇವೆ ಎಂದು ಕೇರಳದ ಉಸ್ತುವಾರಿ ತಾರಿಕ್ ಅನ್ವರ್ ಹೇಳಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಪಾಲಿಗೆ ಖರ್ಗೆ ಲಕ್.. ಆರು ತಿಂಗಳ ಅಂತರದಲ್ಲಿ 'ಕೈ' ತೆಕ್ಕೆಗೆ ಎರಡು ರಾಜ್ಯಗಳು
2013ರಲ್ಲಿ ಆಂಧ್ರಪ್ರದೇಶದಿಂದ ವಿಭಜನೆಯಾದ ತೆಲಂಗಾಣದ ಬಗ್ಗೆ ಕಾಂಗ್ರೆಸ್ ಹೆಚ್ಚಿನ ಗಮನ ಹರಿಸುತ್ತಿದೆ. ಅಲ್ಲಿ ನೆಲೆಯನ್ನು ಭದ್ರಪಡಿಸಿಕೊಳ್ಳಲು ಪಕ್ಷದ ನಾಯಕರು ಶ್ರಮಿಸುತ್ತಿದ್ದಾರೆ. 2019ರಲ್ಲಿ ತೆಲಂಗಾಣದ ಒಟ್ಟು 17 ಲೋಕಸಭಾ ಸ್ಥಾನಗಳ ಪೈಕಿ ಬಿಆರ್‌ಎಸ್ 9 ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್ ಮೂರು, ಬಿಜೆಪಿ ನಾಲ್ಕು ಮತ್ತು ಎಐಎಂಐಎಂ ಒಂದು ಸ್ಥಾನವನ್ನು ಗಳಿಸಿದೆ. ಹೀಗಾಗಿ ತೆಲಂಗಾಣದ ಎಲ್ಲ 17 ಸಂಸದೀಯ ಸ್ಥಾನಗಳಿಗೆ ಗ್ರೌಂಡ್ ರಿಪೋರ್ಟ್ ತಯಾರಿಸಲು ಖರ್ಗೆ ಈಗಾಗಲೇ ಎಐಸಿಸಿ ವೀಕ್ಷಕರನ್ನು ನಿಯೋಜಿಸಿದ್ದು, ಇದನ್ನು 2024ರ ಚುನಾವಣಾ ಕಾರ್ಯತಂತ್ರಕ್ಕೆ ಬಳಸಿಕೊಳ್ಳಲು ಯೋಜಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಒಟ್ಟು 25 ಲೋಕಸಭಾ ಸ್ಥಾನಗಳ ಪೈಕಿ 22ರಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಿದೆ. ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ 2019 ರ ಚುನಾವಣೆಯಲ್ಲಿ ಒಟ್ಟು 39 ಲೋಕಸಭಾ ಸ್ಥಾನಗಳ ಪೈಕಿ 38 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಒಂಭತ್ತು ಸ್ಥಾನಗಳಲ್ಲಿ ಸ್ಪರ್ಧಿಸಿ 8ರಲ್ಲಿ ಗೆದ್ದಿತ್ತು. ರಾಜ್ಯದಲ್ಲಿ ಮೈತ್ರಿ ಗಟ್ಟಿಯಾಗಿರುವುದರಿಂದ ಡಿಎಂಕೆಯಿಂದ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಹಾಗೂ ಮೈತ್ರಿ ಬಲ ಪಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.
ಇದನ್ನೂ ಓದಿ:ರಾಜಸ್ಥಾನ ಚುನಾವಣಾ ಕಾರ್ಯತಂತ್ರದ ಬಗ್ಗೆ ಖರ್ಗೆ - ರಾಹುಲ್ ಸಭೆ .. ಗೆಹ್ಲೋಟ್ - ಪೈಲಟ್ ಬಿಕ್ಕಟ್ಟು ಪರಿಹಾರ: ನಾಳೆಯಿಂದಲೇ ಪ್ರಚಾರ ಶುರು