ನವದೆಹಲಿ: ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಸಾಂಪ್ರದಾಯಿಕ ದಲಿತ ಮತಬ್ಯಾಂಕ್ ತನ್ನತ್ತ ಸೆಳೆಯಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ 212 ಆಯ್ದ ವಿಧಾನಸಭೆ ಕ್ಷೇತ್ರಗಳು ಮತ್ತು 61 ಸಂಸದೀಯ ಕ್ಷೇತ್ರಗಳಲ್ಲಿ ಈ ಸಮುದಾಯವನ್ನು ಸಜ್ಜುಗೊಳಿಸಲು ಜುಲೈ 5ರಂದು ಅಭಿಯಾನ ಆರಂಭಿಸಲಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ತನ್ನ ಪ್ರಜಾಪ್ರಭುತ್ವದ ರುಜುವಾತುಗಳು ಹಾಗೂ ಅಂತರ್ಗತ ರಾಜಕೀಯದ ಸೂಚಕವಾಗಿ ದಲಿತ ನಾಯಕ ಖರ್ಗೆ ಅವರನ್ನು ಪಕ್ಷದ ಅತ್ಯುನ್ನತ ಹುದ್ದೆಗೆ ಆಯ್ಕೆ ಮಾಡಿತ್ತು. ಅಧಿಕಾರ ವಹಿಸಿಕೊಂಡ ಕೂಡಲೇ ಅವರು, ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ತೆಕ್ಕೆಗೆ ಜಾರಿ ಇರುವ ಹಿಂದುಳಿದ ಸಮುದಾಯಗಳ ಮನ ಮರಳಿ ಗೆಲ್ಲಲು ದೀರ್ಘಾವಧಿಯ ಕಾರ್ಯಕ್ರಮವನ್ನು ಯೋಜಿಸುವಂತೆ ಪಕ್ಷದ ಹಿರಿಯ ಪದಾಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆಯೇ, ಈಗ ಕಾರ್ಯಕ್ರಮ ಸಜ್ಜಾಗಿದೆ.
''ಜುಲೈ 5ರಂದು ಖರ್ಗೆ ಅವರು ರಾಷ್ಟ್ರೀಯ ನಾಯಕತ್ವ ಅಭಿವೃದ್ಧಿ ಮಿಷನ್ (ಎಲ್‌ಡಿಎಂ) ಪ್ರಾರಂಭಿಸಲಿದ್ದಾರೆ. ಈಗಾಗಲೇ ನಾವು ಕಾರ್ಯಕ್ರಮದ ರೂಪರೇಷೆಯ ಎಲ್ಲ ಕೆಲಸ ಮಾಡಿದ್ದು, ಅದನ್ನು ಜಾರಿ ಮಾಡಲಾಗುತ್ತಿದೆ. ಅಂದು ಪಕ್ಷದ ಅಧ್ಯಕ್ಷರು ದೇಶಾದ್ಯಂತದ ಎಲ್‌ಡಿಎಂ ವ್ಯವಸ್ಥಾಪಕರನ್ನು ಉದ್ದೇಶಿಸಿ ಕಾರ್ಯಕ್ರಮವನ್ನು ಮೇಲ್ವಿಚಾರಣೆ ಮಾಡುವ ಅಪ್ಲಿಕೇಶನ್ಗೆ ಚಾಲನೆ ನೀಡಲಿದ್ದಾರೆ'' ಎಂದು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಎಐಸಿಸಿ ರಾಷ್ಟ್ರೀಯ ಸಂಯೋಜಕ ಕೆ.ರಾಜು 'ಈಟಿವಿ ಭಾರತ್'ಗೆ ತಿಳಿಸಿದರು.
61 ಲೋಕಸಭೆ ಕ್ಷೇತ್ರಗಳ ಗೆಲ್ಲಲು ಖರ್ಗೆ ರಣತಂತ್ರ:''ಎಲ್‌ಡಿಎಂ ಕಾರ್ಯಕ್ರಮ ದೀರ್ಘಾವಧಿಯ ಯೋಜನೆಯಾಗಿದೆ. ಆದರೂ, ಅಲ್ಪಾವಧಿಯಲ್ಲಿ ನಾಲ್ಕು ರಾಜ್ಯಗಳಾದ ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ 212 ಮೀಸಲು ವಿಧಾನಸಭಾ ಸ್ಥಾನಗಳಲ್ಲಿ ಈ ವರ್ಷ ಚುನಾವಣೆಗೆ ಕಾರ್ಯ ನಡೆಸಲಿದೆ. 2024ರಲ್ಲಿ ಚುನಾವಣೆ ನಡೆಯಲಿರುವ 61 ಮೀಸಲು ಲೋಕಸಭಾ ಕ್ಷೇತ್ರಗಳಲ್ಲೂ ಈ ಕಾರ್ಯಕ್ರಮ ಆರಂಭವಾಗಲಿದೆ. ಈ 61 ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 2019ರ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿತ್ತು. 2024ರ ಚುನಾವಣೆಯಲ್ಲೂ ಈ ಕ್ಷೇತ್ರಗಳಲ್ಲಿ ಪಕ್ಷವು ಹೋರಾಡಲಿದೆ'' ಎಂದು ರಾಜು ಹೇಳಿದರು.