ನವದೆಹಲಿ:ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ಇದೀಗ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೊರೊನಾದಿಂದ ಬಳಲುತ್ತಿರುವುದಾಗಿ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವ ಖರ್ಗೆ, 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ತಾವು ಭಾಗಿಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕೋತ್ಸವ ಒಂದು ಐತಿಹಾಸಿಕ ಸಂದರ್ಭ ಆಗಸ್ಟ್ 15ರಂದು ನಡೆಯಲಿರುವ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಲು ನಾನು ಉತ್ಸುಕನಾಗಿದ್ದೆ. ಆದರೆ, ಕೋವಿಡ್ ಪಾಸಿಟಿವ್ ಬಂದಿರುವ ಕಾರಣ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಭಾಗಿಯಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಎರಡನೇ ಸಲ ವಕ್ಕರಿಸಿದ ಕೊರೊನಾ
ಸ್ವಾತಂತ್ರ್ಯೋತ್ಸವದಲ್ಲಿ ದೈಹಿಕವಾಗಿ ಹಾಜರಾಗಲು ಸಾಧ್ಯವಾಗದಿದ್ದರೂ, ಈ ಸಂಭ್ರಮದಲ್ಲಿ ರಾಷ್ಟ್ರದೊಂದಿಗೆ ಭಾಗಿಯಾಗಿರುತ್ತೇನೆ. ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂದು ತಿಳಿಸಿದ್ದಾರೆ. ಇಂದು ಬೆಳಗ್ಗೆಯಷ್ಟೇ ಸೋನಿಯಾ ಗಾಂಧಿ ಅವರಿಗೆ ಎರಡನೇ ಸಲ ಕೋವಿಡ್ ಸೋಂಕು ದೃಢಪಟ್ಟಿತ್ತು. ಕಳೆದ ಮೂರು ದಿನಗಳ ಹಿಂದೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾಗೂ ಕೋವಿಡ್ ಸೋಂಕು ಇರುವುದು ಪತ್ತೆಯಾಗಿತ್ತು.
ಮಲ್ಲಿಕಾರ್ಜುನ್ ಖರ್ಗೆ ಅವರಿಗೂ ಕಳೆದ ಜನವರಿ ತಿಂಗಳಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಇದೀಗ ಎರಡನೇ ಸಲ ಅವರಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಕಳೆದ ಕೆಲ ದಿನಗಳಿಂದ ದೇಶಾದ್ಯಂತ ಕೋವಿಡ್ ಸೋಂಕಿತ ಪ್ರಕರಣಗಳಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ. ಹೀಗಾಗಿ, ದೆಹಲಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.