ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ಬಂದಿದೆ ಎಂದು ಪಕ್ಷ ಶುಕ್ರವಾರ ತಿಳಿಸಿದೆ.
ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆ ಮತ್ತು ದೇಗುಲ ಉದ್ಘಾಟನೆ ನಿಗದಿಯಾಗಿದೆ. ಈ ಕಾರ್ಯಕ್ರಮಕ್ಕೆ ರಾಮ ಮಂದಿರ ಟ್ರಸ್ಟ್ ಹಲವು ಗಣ್ಯರನ್ನು ಆಮಂತ್ರಿಸಿದೆ. ಕಾಂಗ್ರೆಸ್ ಪ್ರಮುಖರಿಗೆ ಆಹ್ವಾನ ನೀಡಿರುವುದನ್ನು ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ, ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ ಸ್ಪಷ್ಟಪಡಿಸಿದ್ದಾರೆ.
"ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಲಾಗಿದೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಕುರಿತು ಸೂಕ್ತ ಸಮಯದಲ್ಲಿ ಅವರು ನಿರ್ಧರಿಸುವರು'' ಎಂದು ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ. ಅಲ್ಲದೇ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಅಧೀರ್ ರಂಜನ್ ಚೌಧರಿ ಅವರಿಗೂ ಆಹ್ವಾನ ನೀಡಲಾಗಿದೆ.
ಬಿಜೆಪಿಯಿಂದ ರಾಜಕೀಯ-ವೇಣುಗೋಪಾಲ್: ರಾಮ ಮಂದಿರ ವಿಷಯವಾಗಿ ಕೇರಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಪಕ್ಷದ ನಾಯಕರು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ಸ್ವೀಕರಿಸಿದ್ದನ್ನು ಖಚಿತಪಡಿಸಿದರು. ಇದೇ ವೇಳೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.