ರಂಗಾರೆಡ್ಡಿ (ತೆಲಂಗಾಣ): ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಮತ್ತು ಬಿಜೆಪಿ ನಡುವೆ ಮೈತ್ರಿ ನಡೆದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು. ಎರಡು ಪಕ್ಷಗಳ ಮೌನ ಅವರ ನಡುವಿನ ರಹಸ್ಯ ಒಪ್ಪಂದಕ್ಕೆ ಪುಷ್ಠಿ ನೀಡುತ್ತಿದೆ ಎಂದು ಟೀಕಾಸಮರ ನಡೆಸಿದ್ದಾರೆ.
ರಂಗಾರೆಡ್ಡಿಯಲ್ಲಿ ಶನಿವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಖರ್ಗೆ, ಕಾಂಗ್ರೆಸ್ ಪಕ್ಷದ ಹಲವು ವರ್ಷಗಳ ಸಾಧನೆಗಳನ್ನು ವಿವರಿಸಿದರು. ಇದಾದ ನಂತರ, ಬಿಜೆಪಿ ಮತ್ತು ಬಿಆರ್ಎಸ್ ಸ್ನೇಹಿತರಾಗಿದ್ದಾರೆ. ಅವರೊಳಗೆ ಕೆಲವು ಒಳಒಪ್ಪಂದಗಳಿದ್ದಾಗ ಪರಸ್ಪರರ ವಿರುದ್ಧ ಮಾತನಾಡಲು ಸಾಧ್ಯವಿಲ್ಲ ಎಂದು ಟಾಂಗ್ ಕೊಟ್ಟರು.
ಬಿಜೆಪಿಯವರು ನಾವು (ಕಾಂಗ್ರೆಸ್) ಕಳೆದ 53 ವರ್ಷಗಳಲ್ಲಿ ಏನೂ ಮಾಡಿಲ್ಲ ಎಂದು ಆಪಾದಿಸುತ್ತಾರೆ. ರಿಪೋರ್ಟ್ ಕಾರ್ಡ್ ತೋರಿಸುವಂತೆ ನಮಗೆ ಕೇಳುತ್ತಾರೆ. ಈ ಪ್ರಶ್ನೆಯನ್ನು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿಯೂ ಕೇಳಿದ್ದಾರೆ. ಆದರೆ ತೆಲಂಗಾಣದಲ್ಲಿ ಕೆಸಿಆರ್ ಮತ್ತು ಬಿಜೆಪಿ ದೋಸ್ತಿ ಮಾಡಿಕೊಂಡಿರುವುದರಿಂದ ಈ ಪ್ರಶ್ನೆ ಕೇಳುತ್ತಾರೋ ಇಲ್ಲವೋ ಗೊತ್ತಿಲ್ಲ. ಇದು ಅವರ ಆಂತರಿಕ ಸ್ನೇಹವಾಗಿರುವುದರಿಂದ ಅವರು ಗಟ್ಟಿಯಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.
ತೆಲಂಗಾಣ ಸಿಎಂ ಕೆಸಿಆರ್ ಅವರು ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್ ಬ್ಲಾಕ್‌ಗೆ (I.N.D.I.A) ಸೇರದಿರುವ ಬಗ್ಗೆ ಖರ್ಗೆ ಮತ್ತಷ್ಟು ಟೀಕಿಸಿ ಮಾತನಾಡಿದರು. ನಮ್ಮ ಭಾರತ ಮೈತ್ರಿಕೂಟದ 26 ಪಕ್ಷಗಳು ಕೇಂದ್ರದಲ್ಲಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಕಿತ್ತೆಸೆಯಲು ಸಿದ್ಧವಾಗಿದೆ. ಆದರೆ ಬಿಆರ್ಎಸ್ ಇದುವರೆಗೂ ಯಾವುದೇ ಸಭೆಗಳಿಗೆ ಹಾಜರಾಗಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ತೆಗೆದುಹಾಕಲು ಎಂದಿಗೂ ಪ್ರಯತ್ನಿಸಲಿಲ್ಲ ಎಂದು ಖಾರವಾಗಿ ನುಡಿದರು.