ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಕರ್ನಾಟಕದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ನಲ್ಲಿ "ಒಬ್ಬ ವ್ಯಕ್ತಿ ಒಂದು ಹುದ್ದೆ ನಿಯಮ"ದ ಅನುಸಾರ ಅವರು ವಿಪಕ್ಷ ನಾಯಕ ಹುದ್ದೆಗೆ ರಾಜೀನಾಮೆ ನೀಡಿದ್ದು, ಪತ್ರವನ್ನು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರವಾನಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ನಾನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಹಿನ್ನೆಲೆಯಲ್ಲಿ, ರಾಜ್ಯಸಭೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಈ ಮೂಲಕ ರಾಜೀನಾಮೆ ನೀಡುತ್ತೇನೆ ಎಂದು ಖರ್ಗೆ ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಖರ್ಗೆ ಅವರ ರಾಜೀನಾಮೆ ಅಂಗೀಕರಿಸುವುದು ಅಥವಾ ಬಿಡುವುದು ಅಧ್ಯಕ್ಷರ ನಿರ್ಧಾರಕ್ಕೆ ಬಿಟ್ಟದ್ದು, ಸದ್ಯಕ್ಕೆ ಈಗ ಅಧಿವೇಶನ ಇಲ್ಲ, ಅಧ್ಯಕ್ಷೀಯ ಚುನಾವಣೆ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬಹುದು ಎಂದು ರಾಜ್ಯಸಭಾ ಸದಸ್ಯ ಪ್ರಮೋದ್ ತಿವಾರಿ ಹೇಳಿದ್ದಾರೆ.
ಆದರೆ, ಹಿರಿಯರಾದ ದಿಗ್ವಿಜಯ ಸಿಂಗ್ ಮತ್ತು ಪಿ ಚಿದಂಬರಂ ಅವರು ಸಾಂವಿಧಾನಿಕ ಹುದ್ದೆಗೆ ಸ್ವಾಭಾವಿಕ ಹಕ್ಕುದಾರರಾಗಿದ್ದಾರೆ. ಪ್ರಸ್ತುತ ಪಕ್ಷವು ಉನ್ನತ ಸ್ಥಾನಕ್ಕೆ ಆಂತರಿಕ ಚುನಾವಣೆ ನಡೆಸುತ್ತಿದ್ದು, ಶುಕ್ರವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಹೊರ ಬೀಳಲಿದೆ. 80 ವರ್ಷದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈಗಾಗಲೇ 30 ಕ್ಕೂ ಹೆಚ್ಚು ಪ್ರಮುಖ ನಾಯಕರು ಬೆಂಬಲ ಘೋಷಿಸಿದ್ದಾರೆ. ಇವರರಲ್ಲಿ ದಿಪೇಂದರ್ ಹೂಡಾ, ಸಲ್ಮಾನ್ ಖುರ್ಷಿದ್, ಅಶೋಕ್ ಗೆಹ್ಲೋಟ್, ದಿಗ್ವಿಜಯ ಸಿಂಗ್, ಮನೀಶ್ ತಿವಾರಿ, ಪೃಥ್ವಿರಾಜ್ ಪ್ರಮುಖರಾಗಿದ್ದಾರೆ.
20 ನಾಮಪತ್ರ ಸಲ್ಲಿಕೆ:ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಪ್ರಕಾರ, ಶುಕ್ರವಾರ ಒಟ್ಟು 20 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬ ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸುತ್ತಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟ ಪಡಿಸಿದರು. ಖರ್ಗೆಯವರು ಗಾಂಧಿ ಕುಟುಂಬದ ನಿಷ್ಠಾವಂತರು ಎನ್ನುವುದು ಬಹುತೇಕ ಬಹಿರಂಗ ಸತ್ಯ. ಜಿ-23 ಬಣ ಸೇರಿದಂತೆ ಹಲವು ಪ್ರಮುಖ ನಾಯಕರು ಖರ್ಗೆ ಅವರು ನಾಮಪತ್ರ ಸಲ್ಲಿಸುವಾಗ ಪಕ್ಕದಲ್ಲಿದ್ದರು.
ಮಲ್ಲಿಕಾರ್ಜುನ ಖರ್ಗೆ 14, ಶಶಿ ತರೂರ್ ಐದು ಮತ್ತು ಜಾರ್ಖಂಡ್ ಕಾಂಗ್ರೆಸ್ ನಾಯಕ ಕೆಎನ್ ತ್ರಿಪಾಠಿ 14 ನಾಮಪತ್ರಗಳನ್ನು ಸಲ್ಲಿಸಿದ್ದು, ಅವುಗಳನ್ನು ಸ್ವೀಕರಿಸಲಾಗಿದೆ ಎಂದು ಮಿಸ್ತ್ರಿ ಹೇಳಿದರು. ಅಭ್ಯರ್ಥಿಗಳು ತಮ್ಮ ಸ್ವಂತ ಇಚ್ಛೆಯಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಆದರೆ, ಗಾಂಧಿ ಕುಟುಂಬ ನಾಮಪತ್ರ ಸಲ್ಲಿಸಿದ ಯಾರ ಪರ ಅಥವಾ ವಿರುದ್ಧವೂ ಇಲ್ಲ. ಈ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಹಾಗೂ ಅವರ ಕುಟುಂಬ ತಟಸ್ಥವಾಗಿರಲಿದೆ ಎಂದು ಮಧುಸೂದನ್ ಮಿಸ್ತ್ರಿ ಸ್ಪಷ್ಟಪಡಿಸಿದ್ದಾರೆ.
ಮೊದಲು ದಿಗ್ವಿಜಯ ಸಿಂಗ್ ಚುನಾವಣೆಗೆ ನಿಲ್ಲಲು ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದರು. ನಾಮನಿರ್ದೇಶನಕ್ಕಾಗಿ ಫಾರ್ಮ್ಗಳನ್ನು ಪಡೆದುಕೊಂಡಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಅಧ್ಯಕ್ಷ ಸ್ಥಾನದ ರೇಸ್ನಿಂದ ಹಿಂದೆ ಸರಿದು ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ಉನ್ನತ ಹುದ್ದೆಗೆ ಸೋನಿಯಾ ಗಾಂಧಿ ಆಯ್ಕೆ ಮಾಡಬಹುದೆಂಬ ಇಂಗಿತದ ಹಿನ್ನೆಲೆಯಲ್ಲಿ ಅವರು ನಿರ್ಧಾರ ಕೈಗೊಂಡರು ಎನ್ನಲಾಗಿದೆ.
ರಾಜ್ಯಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಪೈಪೋಟಿ:ಇನ್ನು ವಿಶೇಷ ಎಂದರೆ ಚಿದಂಬರಂ ಸೆಪ್ಟೆಂಬರ್ 29 ರಂದು ದಿಗ್ವಿಜಯ ಅವರನ್ನು ಭೇಟಿ ಮಾಡಿದ್ದರು. ಹೈಪ್ರೊಫೈಲ್ ಸ್ಪರ್ಧೆಯಲ್ಲಿ ಖರ್ಗೆ ಅವರ ಹೆಸರು ಮುಂಚೂಣೆಯಲ್ಲಿರುವುದರಿಂದ ಮಧ್ಯಪ್ರದೇಶಕ್ಕೆ ಸೇರಿದ ಸಿಂಗ್ ಅವರು ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ, ಮಾಜಿ ಹಣಕಾಸು ಸಚಿವ ಚಿದಂಬರಂ ಸಹ ಪ್ರಬಲ ಆಕಾಂಕ್ಷಿಯಾಗಿದ್ದು, ದಕ್ಷಿಣ ಭಾರತಕ್ಕೆ ಸೇರಿದವರಾಗಿದ್ದಾರೆ. ಪ್ರಸ್ತುತ ದಿಗ್ವಿಜಯ ಸಿಂಗ್ ಮತ್ತು ಚಿದಂಬರಂ ಇಬ್ಬರೂ ಯಾವುದೇ ಪಕ್ಷದ ಹುದ್ದೆಗಳನ್ನು ಹೊಂದಿಲ್ಲ. ಇನ್ನು ದಿಗ್ವಿಜಯ್ ಮತ್ತು ಚಿದಂಬರಂ ಹೊರತುಪಡಿಸಿ ಪಕ್ಷದ ಹೈಕಮಾಂಡ್ ಪರಿಗಣಿಸಬಹುದಾದ ಪ್ರಮುಖರಲ್ಲಿ ಜೈರಾಮ್. ರಮೇಶ್ ಮತ್ತು ಕೆ.ಸಿ.ವೇಣುಗೋಪಾಲ್ ಇದ್ದಾರೆ. ಆದರೆ ಈ ಇಬ್ಬರೂ ನಾಯಕರು ಈಗ ಪಕ್ಷದ ಪ್ರಮುಖ ಹುದ್ದೆಗಳಲ್ಲಿದ್ದಾರೆ. ಜೈರಾಂ ರಮೇಶ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂವಹನದ ಉಸ್ತುವಾರಿ ಹೊತ್ತುಕೊಂಡಿದ್ದಾರೆ. ಇನ್ನು ವೇಣುಗೋಪಾಲ್ ಸಂಘಟನೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.