ನವದೆಹಲಿ: ಕಳೆದ ವರ್ಷ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಹಳೆಯ ಪಕ್ಷದ ಪಾಲಿಗೆ ಲಕ್ ತಂದಿದ್ದಾರೆ. ಅಕ್ಟೋಬರ್ 26ರಂದು ಪಕ್ಷದ ಅಧ್ಯಕರಾದ ತಕ್ಷಣವೇ ಅಖಾಡಕ್ಕೆ ಇಳಿದು ಬಿಜೆಪಿ ಆಡಳಿತವಿದ್ದ ಹಿಮಾಚಲ ಪ್ರದೇಶದಲ್ಲಿ ಪ್ರಚಾರ ಕೈಗೊಂಡು ಚುನಾವಣೆಯ ಮೇಲ್ವಿಚಾರಣೆ ಮಾಡಿದ್ದರು. ಡಿಸೆಂಬರ್ 8ರಂದು ಹೊರಬಿದ್ದ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳೊಂದಿಗೆ ಅಧಿಕಾರ ಹಿಡಿಯಿತು. ಇದೀಗ ಬಿಜೆಪಿ ಆಡಳಿತದ ಕರ್ನಾಟಕದಲ್ಲೂ ಕಾಂಗ್ರೆಸ್‌ಗೆ ಮತ್ತೊಂದು ದಿಗ್ವಿಜಯ ಸಿಕ್ಕಿದೆ.
ಕರ್ನಾಟಕವು ಖರ್ಗೆ ಅವರಿಗೆ ತವರು ರಾಜ್ಯವಾಗಿರುವುದರಿಂದ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಕರ್ನಾಟಕದಾದ್ಯಂತ ಪ್ರಚಾರ ನಡೆಸಿದ್ದು ಮಾತ್ರವಲ್ಲದೆ ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲೇ ಠಿಕಾಣಿ ಹೂಡಿದ್ದರು. ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ಬಣಗಳನ್ನು ಒಗ್ಗೂಡಿಸುವಲ್ಲೂ ಸಫಲರಾಗಿದ್ದರು.
''ಖಂಡಿತವಾಗಿಯೂ ಖರ್ಗೆ ಅವರು ಪಕ್ಷಕ್ಕೆ ಅದೃಷ್ಟವಂತರು. ಅವರು ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾದ ಕೂಡಲೇ ಹಿಮಾಚಲ ಪ್ರದೇಶವನ್ನು ಗೆದ್ದರು. ಚುನಾವಣಾ ಹೋರಾಟದಲ್ಲಿನ ಅವರ ಅಪಾರ ಅನುಭವ ಹಿಮಾಚಲ ಪ್ರದೇಶದಲ್ಲಿ ಪಕ್ಷಕ್ಕೆ ನೆರವಾಯಿತು. ಕರ್ನಾಟಕವು ಅವರ ತವರು ರಾಜ್ಯವಾಗಿರುವುದರಿಂದ ರಾಜ್ಯದ ಪ್ರತಿಯೊಂದು ಭಾಗ ಮತ್ತು ಅದರ ಚಲನಶೀಲತೆಯನ್ನು ತಿಳಿದಿದ್ದರು. ಅವರನ್ನು ಎಲ್ಲ ರಾಜ್ಯ ನಾಯಕರು ಗೌರವಿಸುತ್ತಾರೆ. ಹೀಗಾಗಿ ಸ್ಥಳೀಯ ತಂಡವನ್ನು ಒಗ್ಗೂಡಿಸಲು ಸಾಧ್ಯವಾಯಿತು. ಇದು ನಮ್ಮ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ'' ಎನ್ನುತ್ತಾರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್.
ಇದನ್ನೂ ಓದಿ:ಕರ್ನಾಟಕದಲ್ಲಿ ಕಾಂಗ್ರೆಸ್ ದಿಗ್ವಿಜಯ: ಅದ್ವಿತೀಯ ಸಾಧನೆಯ ಹಿಂದಿನ ರೂವಾರಿ ಇವರೇ ಅಂತೆ!
''ಖರ್ಗೆ ಅವರು 80ರ ಹರೆಯದಲ್ಲೂ ಕರ್ನಾಟಕದಾದ್ಯಂತ ಹೆಚ್ಚಿನ ಶಕ್ತಿಯಿಂದ ಪ್ರಚಾರ ಮಾಡಿದರು. ದಲಿತ ನಾಯಕರು ಸಹ ಕಾಂಗ್ರೆಸ್ ಅಧ್ಯಕ್ಷರಾಗಬಲ್ಲ ಎಂಬ ಸಕಾರಾತ್ಮಕ ಸಂದೇಶವನ್ನು ಕರ್ನಾಟಕದ ಎಸ್‌ಸಿ, ಎಸ್‌ಟಿ ಮತದಾರರಲ್ಲಿ ರವಾನಿಸಿದರು. ಮತ್ತೊಂದೆಡೆ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರಿಗೆ ತಮ್ಮ ತವರು ರಾಜ್ಯ ಹಿಮಾಚಲ ಪ್ರದೇಶದಲ್ಲಿ ಪಕ್ಷಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಿರಲಿಲ್ಲ" ಎಂದು ಅನ್ವರ್ ಹೇಳಿದರು.