ನವದೆಹಲಿ: ಸಾಂವಿಧಾನಿಕ ಮತ್ತು ಸಾಂಸ್ಥಿಕ ಮೌಲ್ಯಗಳ ಹೊರತಾಗಿಯೂ ಸ್ವಾತಂತ್ರ್ಯದ ನಂತರ ಭಾರತ ಸಾಧಿಸಿದ್ದ ಎಲ್ಲ ಸಂಸ್ಥೆಗಳು, ವ್ಯವಸ್ಥೆಗಳು ಮತ್ತು ತತ್ವಗಳನ್ನು ಅಧಿಕಾರದಲ್ಲಿರುವವರು ಬುಡಮೇಲು ಮಾಡುತ್ತಿರುವ ನಿರ್ಣಾಯಕ ಘಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ 50 ವರ್ಷಗಳ ಚುನಾವಣಾ ರಾಜಕೀಯದ ಕುರಿತ ''ಮಲ್ಲಿಕಾರ್ಜುನ ಖರ್ಗೆ: ಸಹಾನುಭೂತಿ, ನ್ಯಾಯ ಮತ್ತು ಅಂತರ್ಗತ ಅಭಿವೃದ್ಧಿಯೊಂದಿಗೆ ರಾಜಕೀಯ ತೊಡಗುವಿಕೆ'' ('Mallikarjun Kharge: Political Engagement with Compassion, Justice, and Inclusive Development) ಎಂಬ ಅಭಿನಂದನಾ ಗ್ರಂಥವನ್ನು ಬುಧವಾರ ಬಿಡುಗಡೆಗೊಳಿಸಿ ಸೋನಿಯಾ ಗಾಂಧಿ ಮಾತನಾಡಿದರು. ಖರ್ಗೆ ಅವರು ಅನೇಕ ಜವಾಬ್ದಾರಿಗಳನ್ನು ಹಂಚಿಕೊಂಡಿದ್ದಾರೆ. ಪ್ರಬಲ ಸಂಘಟನಾ ನಾಯಕರಾಗಿ ಅವರು ಪಕ್ಷದಲ್ಲಿ ವಿಶ್ವಾಸ ಹೊಂದಿದ್ದಾರೆ. ಭಾರತದ ಈ ಐತಿಹಾಸಿಕ ಸಂಘರ್ಷದಲ್ಲಿ ಕಾಂಗ್ರೆಸ್ ಮುನ್ನಡೆಸಲು ಸೂಕ್ತ ವ್ಯಕ್ತಿ ಎಂದು ಅವರು ಪ್ರತಿಪಾದಿಸಿದರು.
ಐವತ್ತು ವರ್ಷಗಳು ರಾಜಕೀಯದಲ್ಲಿ ಸುದೀರ್ಘ ಅವಧಿಯಾಗಿದೆ. ಖರ್ಗೆ ಅವರು ಅನಿರೀಕ್ಷಿತ ಹಾದಿಯಲ್ಲಿ ಸಾಗಿ ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಎತ್ತರಕ್ಕೆ ಏರುತ್ತಲೇ ಇದ್ದರು. ಖರ್ಗೆಯವರು ಒಮ್ಮೆಯೂ ತಮ್ಮ ಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಳ್ಳಲಿಲ್ಲ ಅಥವಾ ಬಡವರ ಸಮಸ್ಯೆಯಿಂದ ಹಿಂದೆ ಸರಿದಿಲ್ಲ. ರಾಜಕೀಯ ಹೋರಾಟದಲ್ಲಿ ಗೆಲ್ಲಲು ಅವರು ಒಮ್ಮೆಯೂ ಘನತೆ ಮತ್ತು ನಡವಳಿಕೆಯಲ್ಲಿ ರಾಜಿ ಮಾಡಿಕೊಂಡಿಲ್ಲ. ಅದಕ್ಕಾಗಿಯೇ ಇಂದು ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಎತ್ತರಕ್ಕೆ ತಲುಪಿದ್ದಾರೆ ಎಂದು ಸೋನಿಯಾ ಹೇಳಿದರು.
ಖರ್ಗೆ ಅವರು ಬ್ಲಾಕ್, ಜಿಲ್ಲೆ, ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿದ್ದರೂ ಅವರು ನಿಭಾಯಿಸಿದ ಪ್ರತಿಯೊಂದು ಹುದ್ದೆ ಮತ್ತು ಜವಾಬ್ದಾರಿಯಲ್ಲಿ ವೈಶಿಷ್ಟತೆದಿಂದ ಸೇವೆ ಸಲ್ಲಿಸಿದ್ದಾರೆ. ಅವರು ಯಾವಾಗಲೂ ತಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷ ಮತ್ತು ಸಂಘಟನೆಗೆ ಬದ್ಧ ಆಗಿದ್ದಾರೆ. ಅವರ ಸಹೋದ್ಯೋಗಿಗಳ ಸ್ಥಾನಮಾನ ಎಷ್ಟೇ ಉನ್ನತ ಅಥವಾ ಕೆಳಮಟ್ಟದಲ್ಲಿದ್ದರೂ, ಖರ್ಗೆ ಯಾವಾಗಲೂ ಒಮ್ಮತ ಮತ್ತು ಸಹಕಾರಿ ಮನೋಭಾವ ತೋರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.