ನವದೆಹಲಿ: ತಮ್ಮ ಪಕ್ಷದ ಸಹೋದ್ಯೋಗಿ ಕುಮಾರ್ ವಿಶ್ವಾಸ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್, ಇದು ಹಾಸ್ಯ, ಅವರ ಆರೋಪಗಳನ್ನು ನಾನು ನಂಬುವುದಾದರೆ ನಾನೊಬ್ಬ ದೊಡ್ಡ ಭಯೋತ್ಪಾದಕನಾದಂತೆ, ಕಳೆದ 10 ವರ್ಷಗಳಲ್ಲಿ ಭದ್ರತಾ ಏಜೆನ್ಸಿಗಳು ಈ ಸಂಬಂಧ ಏನು ಮಾಡುತ್ತಿವೆ ಎಂದು ಪ್ರಶ್ನಿಸಿದ್ದಾರೆ.
ಕೇಜ್ರಿವಾಲ್ ತಮ್ಮ ಟ್ವೀಟ್‌ನಲ್ಲಿ, ನೂರು ವರ್ಷಗಳ ಹಿಂದೆ ಭಗತ್ ಸಿಂಗ್ ಅವರನ್ನು ಬ್ರಿಟಿಷರು ಭಯೋತ್ಪಾದಕ ಎಂದು ಕರೆದರು. ನಾನು ಭಗತ್ ಅವರ ಕಟ್ಟಾ ಅನುಯಾಯಿ. ಇಂದು ಇತಿಹಾಸ ಮರುಕಳಿಸುತ್ತಿದೆ. ಈ ಎಲ್ಲ ಭ್ರಷ್ಟರು ಭಗತ್ ಸಿಂಗ್ ಅವರ ಶಿಷ್ಯನನ್ನು ಆ ರೀತಿ ಬ್ರ್ಯಾಂಡ್ ಮಾಡಲು ಸೇರಿಕೊಂಡಿದ್ದಾರೆ. ಆದರೆ, ಜನರಿಗೆ ಸತ್ಯ ತಿಳಿದಿದೆ ಎಂದಿದ್ದಾರೆ.
ವಿಶ್ವಾಸ್ರಿಂದ ಗಂಭೀರಹೇಳಿಕೆ: ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಪಂಜಾಬ್‌ನ ಮುಖ್ಯಮಂತ್ರಿ ಸ್ಥಾನ ಪಡೆಯುವುದಕ್ಕಾಗಿ ಶೋಷಿತ ಮತ್ತು ಪ್ರತ್ಯೇಕತಾವಾದಿ ಗುಂಪುಗಳ ಬೆಂಬಲವನ್ನು ಪಡೆಯಲು ಸಿದ್ಧ ಎಂದು ಕುಮಾರ್ ವಿಶ್ವಾಸ್ ಹೇಳಿಕೊಂಡಿದ್ದರು.
ಎಎಪಿಯ ಸ್ಥಾಪಕ ಸದಸ್ಯರಾಗಿದ್ದ ವಿಶ್ವಾಸ್, ಕೇಜ್ರಿವಾಲ್ ಅವರು ಸ್ವತಂತ್ರ ರಾಷ್ಟ್ರದ ಮೊದಲ ಪ್ರಧಾನಿಯಾಗಲು ಅವರ ಸೂತ್ರ ಸಿದ್ಧವಾಗಿದೆ ಎಂದೂ ಹೇಳಿದ್ದಾರೆ. ಈ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ತನಿಖೆಗೆ ಆಗ್ರಹ ಮಾಡಿದ್ದಾರೆ.
ಫೆಬ್ರವರಿ 20 ರಂದು ನಡೆಯಲಿರುವ ಎಲ್ಲಾ 117 ಸ್ಥಾನಗಳಿಗೆ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಚಾರ ಉಸ್ತುವಾರಿ ವಹಿಸಿರುವ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸುವ ಉದ್ದೇಶದಿಂದ ಈ ಹೇಳಿಕೆ ಇರುವ ವಿಡಿಯೋವನ್ನು ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕೇಜ್ರಿವಾಲ್ ಅವರ ವಿರೋಧಿಗಳು ಈ ವಿಡಿಯೊವನ್ನು ವ್ಯಾಪಕವಾಗಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಪ್ರತಿಭಟನೆ: ಸದಸ್ಯರನ್ನು ಸಸ್ಪಂಡ್ ಮಾಡಿ ಎಂದ ರಮೇಶ್ ಕುಮಾರ್, ಗರಂ ಆದ ಸ್ಪೀಕರ್, ಸಿಎಂ!
ಪಂಜಾಬ್ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ವಿರೋಧಿಗಳ ಜೊತೆ ಕೈ ಜೋಡಿಸಿದ್ದು, ದೆಹಲಿ ಸಿಎಂ ಆಪಾದಿತ ಹೇಳಿಕೆಗಳ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ. ಕುಮಾರ್ ವಿಶ್ವಾಸ್ ಅವರ ವಿಡಿಯೋ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆಗೆ ಆದೇಶಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರುತ್ತೇನೆ ಎಂದು ಪಂಜಾಬ್ ಸಿಎಂ ಹೇಳಿದ್ದಾರೆ.
ಷಡ್ಯಂತ್ರದ ಭಾಗವಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆ:ಎಎಪಿ ನಾಯಕ ರಾಘವ್ ಚಡ್ಡಾ ಈ ಎಲ್ಲಾ ರೀತಿಯ ಆರೋಪಗಳನ್ನು ತಳ್ಳಿಹಾಕುತ್ತಾ, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವನ್ನು ಸರ್ಕಾರ ರಚಿಸುವುದನ್ನು ತಡೆಯಲು ಪಕ್ಷಗಳು ಒಗ್ಗೂಡಿವೆ. ಷಡ್ಯಂತ್ರದ ಭಾಗವಾಗಿ ಅರವಿಂದ್ ಕೇಜ್ರಿವಾಲ್‌ರನ್ನು ದೂಷಿಸಲು ಕಾಂಗ್ರೆಸ್, ಬಿಜೆಪಿ ಮತ್ತು ಎಸ್‌ಎಡಿ ನಾಯಕರು ನಿರಂತರವಾಗಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ದೆಹಲಿ ಚುನಾವಣೆಯ ಸಂದರ್ಭದಲ್ಲಿಯೂ, ಅರವಿಂದ್ ಕೇಜ್ರಿವಾಲ್ ಒಬ್ಬ ನಕ್ಸಲೀಯ, ಭಯೋತ್ಪಾದಕ ಎಂದು ವಿರೋಧ ಪಕ್ಷಗಳು ಹೇಳಿದ್ದವು. ಆದರೆ, ದೆಹಲಿಯ ಜನರು ಬಿಜೆಪಿಗೆ ತಕ್ಕ ಉತ್ತರವನ್ನು ನೀಡಿದರು ಎಂದು ವಾಗ್ದಾಳಿ ನಡೆಸಿದರು.