ನವದೆಹಲಿ: ತಮ್ಮ ಉದ್ದೇಶಿತ ಕೊಲೆ ದಂಧೆಯನ್ನು ಮುಂದುವರಿಸುವ ಉದ್ದೇಶದಿಂದ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಪಂಜಾಬ್, ಉತ್ತರ ಪ್ರದೇಶ, ಎನ್‌ಸಿಆರ್ ಮತ್ತು ರಾಜಸ್ಥಾನದಲ್ಲಿ ಶಾರ್ಪ್ ಶೂಟರ್‌ಗಳನ್ನು ನೇಮಿಸಿಕೊಳ್ಳುತ್ತಿವೆ ಎಂಬ ಮಾಹಿತಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ತನಿಖೆಯಿಂದ ತಿಳಿದುಬಂದಿದೆ. ಶಾರ್ಪ್ ಶೂಟರ್‌ಗಳನ್ನು ಗುರುತಿಸಲು ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಸ್ಥಳೀಯ ದರೋಡೆಕೋರರು ಮತ್ತು ಡ್ರಗ್ ಡೀಲರ್‌ಗಳ ಸಹಾಯವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಏಜೆನ್ಸಿ ಮೂಲಗಳು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿವೆ.
ಲಷ್ಕರ್-ಎ-ತೊಯ್ಬಾದೊಂದಿಗೆ ಬಲವಾದ ಸಂಪರ್ಕ ಹೊಂದಿರುವ ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕ ಅರ್ಶ್‌ದೀಪ್ ಅಲಿಯಾಸ್ ಅರ್ಶ್‌ದೀಪ್ ದಲ್ಲಾ, ಈ ಕುರಿತಾದ ಸಂಪೂರ್ಣ ನೇಮಕಾತಿ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಾನೆ ಮತ್ತು ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾನೆ. ಭಾರತದಲ್ಲಿ ಖಲಿಸ್ತಾನಿ ಚಳವಳಿಗೆ ವಿರೋಧ ವ್ಯಕ್ತಪಡಿಸಿದ ಪಂಜಾಬ್‌ನ ಹಲವಾರು ಹಿಂದೂ ನಾಯಕರನ್ನು ಕೊಲ್ಲಬೇಕೆಂದು ಬಯಸಿದ್ದಾನೆ ಅಂತಾ ಮೂಲಗಳು ತಿಳಿಸಿವೆ.
ಮಾಹಿತಿ ಪ್ರಕಾರ, ದಲ್ಲಾ ಈ ಹಿಂದೆ ಜೂನ್‌ನಲ್ಲಿ ಕೆನಡಾದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹರ್ದೀಪ್ ಸಿಂಗ್ ನಿಜ್ಜರ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದ. ಪಂಜಾಬ್, ಉತ್ತರ ಪ್ರದೇಶ, ಎನ್‌ಸಿಆರ್ ಮತ್ತು ರಾಜಸ್ಥಾನದ ಪೊಲೀಸರು ಮತ್ತು ಇತರೆ ಭದ್ರತಾ ಏಜೆನ್ಸಿಗಳಿಗೆ ಶಂಕಿತರು ಮತ್ತು ಸ್ಥಳೀಯ ಗ್ಯಾಂಗ್ ಮುಖಂಡರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡುವಂತೆ ಎನ್‌ಐಎ ಸೂಚಿಸಿದೆ.