ನವದೆಹಲಿ:ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್‌ಬಿ) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿಯ ಆಪ್ತ ಸಹಾಯಕ ಸುಭಾಷ್ ಶಂಕರ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಸುಭಾಷ್ ಶಂಕರ್ ಅವರನ್ನು ಈಜಿಪ್ಟ್‌ನಿಂದ ಮುಂಬೈಗೆ ಗಡಿಪಾರು ಮಾಡಲಾಗಿತ್ತು.
ಶಂಕರ್ ನೀರವ್ ಮೋದಿ ಕಂಪನಿಯಲ್ಲಿ ಡಿಜಿಎಂ ಫೈನಾನ್ಸ್ ಆಗಿದ್ದು, ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು. ಪಿಎನ್‌ಬಿಯ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿತ್ತು. ಸುಭಾಷ್ ಶಂಕರ್ರನ್ನು ಕರೆತರಲು ದೀರ್ಘಕಾಲದವರೆಗೆ ಶೋಧ ಕಾರ್ಯ ನಡೆಸುತ್ತಿತ್ತು. ಈಗ ಭಾರತಕ್ಕೆ ಕರೆತರುವ ಕೆಲಸ ಮಾಡಲಾಗುತ್ತಿತ್ತು. ಸದ್ಯ ಆತನನ್ನು ಬಂಧಿಸಲಾಗಿದ್ದು, ನಾವು ಅವರನ್ನು ಮುಂಬೈ ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇವೆ. ನಂತರ ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.