ಕೊಚ್ಚಿ (ಕೇರಳ):ತೃತೀಯ ಲಿಂಗಿಗಳ ಬಗ್ಗೆ ಸಮಾಜದಲ್ಲಿ ಒಂದು ರೀತಿಯ ತಾತ್ಸಾರ ಮತ್ತು ಮುಖ ತಿರುಗಿಸುವ ಮನೋಭಾವ ಇದ್ದೇ ಇದೆ. ಇದನ್ನೆಲ್ಲಾ ಮೆಟ್ಟಿನಿಂತ ಪದ್ಮಲಕ್ಷ್ಮಿ ಎಂಬವರು ಕೇರಳದ ಮೊದಲ ತೃತೀಯ ಲಿಂಗಿ ವಕೀಲರಾಗಿ ಆಯ್ಕೆಯಾಗಿದ್ದಾರೆ. ಇದಲ್ಲದೇ, ಅವರು ಭೌತಶಾಸ್ತ್ರ ಪದವೀಧರೆ, ವಿಮಾ ಏಜೆಂಟ್, ಕಾನೂನು ವಿದ್ಯಾರ್ಥಿಯಾಗಿದ್ದಾರೆ. ವಕೀಲರಾಗಿರುವ ಪದ್ಮಲಕ್ಷ್ಮಿ ಬಡವರ ಧ್ವನಿಯಾಗುವುದಾಗಿ ಹೇಳಿದ್ದಾರೆ.
ಪದ್ಮಲಕ್ಷ್ಮಿ ವಕೀಲರಾದ ಬಗ್ಗೆ ಅಲ್ಲಿನ ಸಚಿವ ಪಿ.ರಾಜೀವ್ ಮಾಹಿತಿ ನೀಡಿದ್ದು, ಜೀವನದ ಎಲ್ಲ ಎಡರುತೊಡರುಗಳನ್ನು ದಾಟಿ ರಾಜ್ಯದ ಮೊದಲ ತೃತೀಯಲಿಂಗಿ ವಕೀಲರಾಗಿ ಪದ್ಮಲಕ್ಷ್ಮಿ ಆಯ್ಕೆಯಾಗಿದ್ದಾರೆ, ಅವರಿಗೆ ಅಭಿನಂದನೆಗಳು. ಇತಿಹಾಸದಲ್ಲಿ ಮೊದಲಿಗರಾಗುವುದು ಸುಲಭವಲ್ಲ. ಗುರಿ ಸಾಧನೆಯಲ್ಲಿ ತುಂಬಾ ಸಮಸ್ಯೆಗಳಿರುತ್ತವೆ. ಅದಕ್ಕೆ ಅಡ್ಡಿ ಮಾಡುವ, ನಿರುತ್ಸಾಹಪಡಿಸುವ ಜನರೂ ಇರುತ್ತಾರೆ. ಇವೆಲ್ಲವನ್ನೂ ಮೀರಿದ ಪದ್ಮಲಕ್ಷ್ಮಿ ಅವರು ಕಾನೂನು ಇತಿಹಾಸದಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ. ಇವರ ಜೀವನ ಮುಂಗಳಮುಖಿಯರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸಿದ್ದಾರೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಇತ್ತೀಚೆಗೆ 1500 ಜನರಿಗೆ ಬಾರ್ ಎನ್ರೋಲ್ಮೆಂಟ್ ಪ್ರಮಾಣಪತ್ರ ನೀಡಿದೆ. ಅದರಲ್ಲಿ ಲಕ್ಷ್ಮಿ ಒಬ್ಬರು. ಎರ್ನಾಕುಲಂನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಇವರು ಪದವಿ ಪಡೆದಿದ್ದಾರೆ.
ಹಕ್ಕುಗಳ ಉಲ್ಲಂಘನೆ ವಿರುದ್ಧ ಹೋರಾಟ: ಲಕ್ಷ್ಮಿ ಮಾತನಾಡಿ, ವೈದ್ಯಕೀಯ ಮತ್ತು ಶಿಕ್ಷಣ ವೆಚ್ಚಗಳನ್ನು ಪೂರೈಸಲು ಖಾಸಗಿ ವಿಮಾ ಕಂಪನಿ ಮತ್ತು ಎಲ್ಐಸಿ ವಿಮಾ ಏಜೆಂಟ್ ಆಗಿ ಕೆಲಸ ಮಾಡಿದೆ. ಈ ವೇಳೆ ಉಂಟಾಗುವ ಕಾನೂನು ತೊಡಕುಗಳನ್ನು ಕಂಡು ಕಾನೂನು ಪದವಿ ಅಭ್ಯಾಸ ಮಾಡಿದೆ. ಹಿರಿಯ ವಕೀಲರಾದ ಕೆ.ವಿ.ಭದ್ರಕುಮಾರಿ ಅವರ ಬಳಿ ತರಬೇತಿ ಪಡೆದೆ. ಇದರಿಂದ ತಮ್ಮ ವಕೀಲಿಕೆ ವೃತ್ತಿ ಆರಂಭಿಸಲು ಅನುವಾಯಿತು ಎಂದು ತಿಳಿಸಿದರು.