ಕೋಯಿಕ್ಕೋಡ್ (ಕೇರಳ): ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದೆಹಲಿ ಮೂಲದ ಆರೋಪಿ ಶಾರುಖ್ ಸೈಫಿ ಯೂಟ್ಯೂಬರ್ ಆಗಿದ್ದ ಎಂಬ ವಿಷಯ ಬಹಿರಂಗವಾಗಿದೆ. ಪೀಠೋಪಕರಣಗಳ ತಯಾರಿಕೆ ಕುರಿತ ವಿಡಿಯೋಗಳನ್ನು ಮಾಡಿ ಆರೋಪಿ ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡುತ್ತಿದ್ದ. ಈ ವಿಡಿಯೋಗಳಿಗೆ ಸಾವಿರಾರು ವೀಕ್ಷಣೆ ದೊರೆತಿದೆ.
ಏಪ್ರಿಲ್ 2ರಂದು ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶಾರುಖ್ ಸೈಫಿ ಪ್ರಯಾಣಿಸುತ್ತಿದ್ದ. ಈ ವೇಳೆ ಕೋಯಿಕ್ಕೋಡ್ ಜಿಲ್ಲೆಯ ಎಲತ್ತೂರು ಸಮೀಪದ ಕೊರಪುಳ ಸೇತುವೆ ಬಳಿ ಟ್ರೈನ್ನ ಡಿ1 ಕಂಪಾರ್ಟ್ಮೆಂಟ್ನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಮಗು, ಮಹಿಳೆ ಸೇರಿ ಮೂವರು ಸಹಪ್ರಯಾಣಿಕರು ಸಾವನ್ನಪ್ಪಿದ್ದರು. ಇತರ 9 ಮಂದಿ ಗಾಯಗೊಂಡಿದ್ದರು. ಮಂಗಳವಾರ ರಾತ್ರಿ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಶಾರುಖ್ ಸೈಫಿಯನ್ನು ಕೇಂದ್ರ ಗುಪ್ತಚರ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಬಂಧಿಸಿದ್ದರು.
ರತ್ನಗಿರಿ ಮೂಲಕ ಆರೋಪಿ ಅಜ್ಮೀರ್‌ಗೆ ಹೋಗಲು ಪ್ರಯತ್ನಿಸುತ್ತಿದ್ದಾಗ ಅಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸೆರೆ ಹಿಡಿಯಲಾಗಿದೆ. ಸದ್ಯ ಕೇರಳ ಪೊಲೀಸರು ಆರೋಪಿಯನ್ನು ರತ್ನಗಿರಿಯಿಂದ ರಾಜ್ಯಕ್ಕೆ ಕರೆತಂದಿದ್ದಾರೆ. ಶಾರುಖ್ ಸೈಫಿ ಮುಖಕ್ಕೂ ಸುಟ್ಟ ಗಾಯಗಳು ಪತ್ತೆಯಾಗಿದೆ. ಹೀಗಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಜೊತೆಗೆ ಎಲ್ಎಫ್ಟಿ LFT (Liver Function Test -ಯಕೃತ್ತು ಕಾರ್ಯ ಪರೀಕ್ಷೆ) ಸಹ ನಡೆಸಲಾಗಿದೆ. ಈ ವೈದ್ಯಕೀಯ ವರದಿಯ ಪ್ರಕಾರ, ಆರೋಪಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲ. ಆರೋಪಿಯ ದೇಹದ ಮೇಲಿನ ಗಾಯಗಳು ನಾಲ್ಕು ದಿನಗಳ ಹಿಂದಿನವು. ಈತನಿಗೆ ಕೇವಲ 1ರಷ್ಟು ಮಾತ್ರ ಸುಟ್ಟ ಗಾಯಗಳಿಗೆ ಎಂದೂ ಫೊರೆನ್ಸಿಕ್ ವರದಿಯಲ್ಲಿ ದೃಢಪಟ್ಟಿದೆ.
ಪೊಲೀಸ್ ಕಸ್ಟಡಿಗೆ ಆರೋಪಿ:ಆರೋಪಿ ದೇಹದ ಮೇಲೆ ಸುಟ್ಟು ಗಾಯಗಳು ಕಾಣಿಸಿಕೊಂಡು ಹಿನ್ನೆಲೆಯಲ್ಲಿ ಗುರುವಾರ ಖುದ್ದು ನ್ಯಾಯಾಧೀಶರೇ ಆಸ್ಪತ್ರೆಗೆ ಭೇಟಿ ನೀಡಿ, ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆದರೆ, ಯಾವುದೇ ಆರೋಗ್ಯ ಸಮಸ್ಯೆಗಳು ಇಲ್ಲ ಎಂಬ ವೈದ್ಯಕೀಯ ವರದಿಗಳ ಹಿನ್ನೆಲೆಯಲ್ಲಿ ಇಂದು ಪೊಲೀಸರು ಆರೋಪಿಯನ್ನು ಕರೆತಂದು ಕೋಯಿಕ್ಕೋಡ್‌ನ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಪೊಲೀಸರು ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು 11 ದಿನಗಳ ಕಾಲ ಶಾರುಖ್ನನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.