ತಿರುವನಂತಪುರಂ (ಕೇರಳ):ಅತಿ ಹೆಚ್ಚು ಸಾಕ್ಷರರನ್ನು ಹೊಂದಿರುವ ರಾಜ್ಯ ಕೇರಳದಲ್ಲಿ ಇನ್ನು ಮುಂದೆ 'ಸಂಪೂರ್ಣ ಇ- ಆಡಳಿತ' ಜಾರಿಯಾಗಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇ-ಆಡಳಿತದ ಘೋಷಣೆ ಮಾಡಲಿದ್ದಾರೆ. ಇದಾದ ಬಳಿಕ ಇ- ಆಡಳಿತ ಜಾರಿ ಮಾಡಿದ ದೇಶದ ಮೊದಲ ರಾಜ್ಯ ಕೇರಳವಾಗಲಿದೆ ಎಂದು ಸರ್ಕಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
800 ಕ್ಕೂ ಹೆಚ್ಚು ಸರ್ಕಾರಿ ಸೇವೆಗಳನ್ನು ಆನ್‌ಲೈನ್‌ನಲ್ಲಿ ನೀಡುವ ಇ-ಸೇವನಂ ಎಂಬ ಏಕಗವಾಕ್ಷಿ ಕಾರ್ಯವಿಧಾನವನ್ನು ಸರ್ಕಾರ ರೂಪಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೇದಿಕೆಗಳನ್ನು ಬಳಸಿಕೊಂಡು ಸರ್ಕಾರದ ಎಲ್ಲ ಸೇವೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಸಂಪೂರ್ಣ ಸಾಕ್ಷರತಾ ರಾಜ್ಯ:ದೇಶದಲ್ಲಿಯೇ ಕೇರಳವು ಮೊದಲ ಸಂಪೂರ್ಣ ಸಾಕ್ಷರತಾ ರಾಜ್ಯವಾಗಿದೆ. ಹೀಗಾಗಿ ಅಲ್ಲಿನ ರಾಜ್ಯ ಸರ್ಕಾರ ಇದನ್ನು ಬಳಸಿಕೊಳ್ಳಲು ಆಡಳಿತ ಡಿಜಿಲೀಕರಣಕ್ಕೆ ಪ್ರಯತ್ನಿಸುತ್ತಿದೆ. ಕಳೆದೊಂದು ದಶಕದಿಂದ ಇ- ಆಡಳಿತ ಜಾರಿಗೆ ಪ್ರಯತ್ನಿಸುತ್ತಿರುವ ಸರ್ಕಾರದ ದೂರದೃಷ್ಟಿಯ ಕ್ರಮಗಳು ಇದೀಗ ಸಾಕಾರಗೊಂಡಿವೆ. ಮಹತ್ವಾಕಾಂಕ್ಷಿ ನಿರ್ಧಾರ ಜಾರಿ ಬಳಿಕ ಸಶಕ್ತ ಸಮಾಜ ನಿರ್ಮಾಣವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಜನರಿಗೆ ಸರ್ಕಾರಿ ಸೇವೆಗಳ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ಅವರೆಲ್ಲರ ಒಳಗೊಳ್ಳುವಿಕೆಯನ್ನು ಇದು ಹೊಂದಿದೆ. ಡಿಜಿಟಲೀಕರಣಗೊಳಿಸುವುದರ ಜೊತೆಗೆ, ಸಂಪೂರ್ಣ ಇ-ಆಡಳಿತವು ಸೌಲಭ್ಯ ವಂಚಿತರು, ಸಮಾಜದ ಕಟ್ಟಕಡೆಯ ವ್ಯಕ್ತಿ, ಎಲ್ಲ ವರ್ಗಗಳಿಗೂ ನೆರವು ಸಿಗುವುದನ್ನು ಇದು ಖಚಿತಪಡಿಸುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ನಗದು ರಹಿತವಾಗಿ ವಿದ್ಯಾರ್ಥಿ ವೇತನ ಪಾವತಿಗೆ ರಾಜ್ಯ ಸರ್ಕಾರದ ಡಿಜಿಟಲ್ ಪ್ಲಾನ್