ತಿರುವನಂತಪುರಂ(ಕೇರಳ): ಕೇರಳದಲ್ಲಿ ಏಪ್ರಿಲ್ 16 ಹಾಗೂ 17 ರಂದು ಎರಡೂವರೆ ಲಕ್ಷ ಮಂದಿಗೆ ಕೋವಿಡ್ ಟೆಸ್ಟ್ ನಡೆಸಲು ತೀರ್ಮಾನಿಸಲಾಗಿದೆ. ತಿರುವನಂತಪುರದಲ್ಲಿ ಸಿಎಂ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಕುರಿತ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯಾದ್ಯಂತ ಕಠಿಣ ಕ್ರಮ, ನಿಯಂತ್ರಣ, ವ್ಯಾಕ್ಸಿನೇಷನ್ ಎಂಬ ಮೂರು ಅಂಶಗಳ ಮೂಲಕ ಕೋವಿಡ್ ನಿಯಂತ್ರಿಸಲು ಪ್ರಯತ್ನಿಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ. ಚುನಾವಣೆ ಸಂದರ್ಭ ಸಕ್ರೀಯರಾದ ಎಲ್ಲರನ್ನೂ ಕೋವಿಡ್ ಟೆಸ್ಟ್‌ಗೊಳಪಡಿಸಲಾಗುವುದು. ಕೋವಿಡ್ ವಾರಿಯರ್ಸ್ ಹಾಗೂ ಕೊರೊನಾ ವ್ಯಾಪಕವಾಗಿ ಹರಡುವ ಪ್ರದೇಶ,ಸಾರ್ವಜನಿಕ ವಲಯ, ಹಾಸ್ಪಿಟಾಲಿಟಿ, ಪ್ರವಾಸೋದ್ಯಮ, ಅಂಗಡಿ, ಹೋಟೆಲ್, ಮಾರ್ಕೆಟ್, ಸೇವಾ ಕೇಂದ್ರಗಳಲ್ಲಿ ಕೆಲಸ ಮಾಡುವವರು, ಡೆಲಿವರಿ ಎಕ್ಸಿಕ್ಯೂಟಿವ್ಸ್ಗಳನ್ನು ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ.
ಮುಂದಿನ ಎರಡು ವಾರಗಳಲ್ಲಿ ಕೊರೊನಾ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಸ್ಎಸ್ಎಲ್ಸಿ ಹಾಗೂ ಪ್ಲಸ್‌ಟು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಸೌಕರ್ಯ ನೀಡಲಾಗುವುದು. ಮಾರ್ಕೆಟ್‌ಗಳಲ್ಲಿ ನಿಯಂತ್ರಣ ಅಗತ್ಯವಾಗಿದ್ದು, ಎಲ್ಲರೂ ದೈಹಿಕ ಅಂತರ ಪಾಲಿಸಬೇಕು. ಹಬ್ಬ - ಉತ್ಸವ ಹಾಗೂ ಚುನಾವಣಾ ಕ್ಯಾಂಪೇನ್ಗಳಲ್ಲಿ ಜನ ಗುಂಪಾಗಿ ನೋಡಿಕೊಳ್ಳಬೇಕು. ಇದಕ್ಕಾಗಿ ತಜ್ಞರ ಸಲಹೆ , ವ್ಯಾಪಾರಿಗಳ, ಸಂಘಟನೆಗಳ ಪ್ರತಿನಿಗಳ ಸಭೆಯನ್ನು ಕರೆಯಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ, ಮುಖ್ಯ ಕಾರ‍್ಯದರ್ಶಿ ವಿ.ಪಿ. ಜೋಯ್, ರಾಜ್ಯ ಪೊಲೀಸ್ ವರಿಷ್ಠಾಕಾರಿ ಲೋಕನಾಥ್ ಬೆಹ್ರಾ, ಸಂಬಂಧಪಟ್ಟ ಇಲಾಖೆಗಳ ಕಾರ‍್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಮುಖ್ಯಸ್ಥರು, ಜಿಲ್ಲಾ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.
ಇಂದು ಕೇರಳದಲ್ಲಿ ಹೊಸದಾಗಿ 8,778 ಕೊರೊನಾ ಪ್ರಕರಣಗಳು ಪತ್ತೆಯಗಿದ್ದು, 2,642 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮಹಾಮಾರಿಗೆ 26 ಜನ ಬಲಿಯಾಗಿದ್ದಾರೆ.