ತಿರುವನಂತಪುರಂ: ಅಕ್ರಮವಾಗಿ ಚಿನ್ನ ಸಾಗಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಕೇರಳ ಹೈಕೋರ್ಟ್ ನವೆಂಬರ್ 2 ರಂದು 25 ಲಕ್ಷ ರೂಪಾಯಿಗಳ ಬಾಂಡ್ ಹಾಗೂ ಇಬ್ಬರ ಶೂರಿಟಿಯೊಂದಿಗೆ ಜಾಮೀನು ನೀಡಿದ್ದ ಹಿನ್ನೆಲೆಯಲ್ಲಿ ಇಂದು ಜೈಲಿನಿಂದ ಹೊರ ಬಂದಿದ್ದಾರೆ. ಸ್ವಪ್ನಾ ಸುರೇಶ್ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (Unlawful Activities Prevention Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು.
ಸ್ವಪ್ನಾ ಸುರೇಶ್ ಜೊತೆಗೆ ಸರಿತ್ ಪಿ.ಎಸ್, ಮೊಹಮದ್ ಶಫಿ ಪಿ, ಜಲಾಲ್ ಎ.ಎಂ, ರಾಬಿನ್ಸ್ ಹಮೀದ್, ರಮೀಸ್ ಕೆ.ಟಿ, ಶರಾಫುದ್ದೀನ್ ಕೆ.ಟಿ, ಮೊಹಮದ್ ಅಲಿ ಎಂಬ ಏಳು ಮಂದಿಗೂ ಜಾಮೀನು ನೀಡಿ ಕೇರಳ ಹೈಕೋರ್ಟ್ನ ವಿಭಾಗೀಯ ಪೀಠ ಆದೇಶ ಹೊರಡಿಸಿದೆ. ಇವರೆಲ್ಲರ ವಿರುದ್ಧ ರಾಷ್ಟ್ರೀಯ ತನಿಖಾ ದಳ ಪ್ರಕರಣ ದಾಖಲಿಸಿಕೊಂಡಿತ್ತು.