ಕರ್ನಾಟಕ

karnataka

ETV Bharat / bharat

ಧಾರ್ಮಿಕ ಕಾರ್ಯಗಳಿಗೆ ರೋಬೋಟ್ ಆನೆ ಬಳಕೆ: ಕೇರಳದ ದೇಗುಲದಲ್ಲಿ ಹೊಸ ನಡೆ - ರೋಬೋಟ್ ಆನೆ

ಕೇರಳ ದೇಗುಲದ ಮೆರವಣಿಗೆಯಲ್ಲಿ ರೊಬೋಟಿಕ್‌ ಆನೆ ಬಳಕೆ ಮಾಡಲಾಗುತ್ತಿದೆ. ಇದು ಪ್ರಾಣಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

mechanical elephant
ರೋಬೋಟ್ ಆನೆ

By

Published : Mar 1, 2023, 11:02 AM IST

ತ್ರಿಶೂರ್: ಕೇರಳದ ವಿವಿಧ ದೇಗುಲಗಳಲ್ಲಿ ಈಗ ಪೂರಂ ಉತ್ಸವ ನಡೆಯುತ್ತಿದೆ. ಈ ಸಂಭ್ರಮಾಚರಣೆಯಲ್ಲಿ ಅಲಂಕೃತ ಆನೆ ಮೆರವಣಿಗೆ ಪ್ರಧಾನ ಆಕರ್ಷಣೆ. ಇದಕ್ಕಾಗಿ ಸೆರೆ ಹಿಡಿಯಲ್ಪಟ್ಟ ಸಾಕಾನೆಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ತ್ರಿಶೂರ್​​ ಜಿಲ್ಲೆಯ ಇರಿಂಜಲಕ್ಕುಡ ಗ್ರಾಮದ ಶ್ರೀಕೃಷ್ಣ ದೇವಾಲಯಲ್ಲಿ ಪ್ರಾಣಿ ಹಿಂಸೆ ತಪ್ಪಿಸಲು ರೋಬೋಟ್‌ ಆನೆಯನ್ನು ಮೆರವಣಿಗೆಯಲ್ಲಿ ಬಳಸಲಾಗಿದೆ.

ಇಲ್ಲಿನ ಇರಿಂಜದಪ್ಪಿಲ್ಲಿ ಶ್ರೀ ಕೃಷ್ಣ ದೇವಾಲಯದಲ್ಲಿ ಧಾರ್ಮಿಕ ಆಚರಣೆಗಳನ್ನು ನಿರ್ವಹಿಸಲು ಯಾಂತ್ರಿಕ ಆನೆಯನ್ನು ಬಳಸಲಾಗಿದೆ. ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾ ಪ್ರಶಸ್ತಿ ವಿಜೇತ ನಟಿ ಪಾರ್ವತಿ ತಿರುವೋತ್ತು ಅವರ ಬೆಂಬಲದೊಂದಿಗೆ ಪೆಟಾ ಇಂಡಿಯಾ ಸಂಸ್ಥೆಯು ಈ ಯಾಂತ್ರಿಕ ಆನೆಯನ್ನು ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದೆ.

ಇರಿಂಜದಪ್ಪಿಲ್ಲಿ 'ರಾಮನ್' ಎಂಬ ಹೆಸರಿನ ಯಾಂತ್ರಿಕ ಆನೆ 11 ಅಡಿ ಎತ್ತರ ಹಾಗೂ 800 ಕೆ.ಜಿ ತೂಕವಿದೆ. ಆನೆಯ ತಲೆ, ಕಣ್ಣು, ಬಾಯಿ, ಕಿವಿ ಮತ್ತು ಬಾಲ ಎಲ್ಲವೂ ವಿದ್ಯುತ್​​ನಿಂದ ಮೂಲಕ ಕೆಲಸ ಮಾಡುತ್ತವೆ. ಆನೆಗಳನ್ನು ಅಥವಾ ಇತರ ಯಾವುದೇ ಪ್ರಾಣಿಗಳನ್ನು ಆಚರಣೆ, ಉತ್ಸವ ಅಥವಾ ಯಾವುದೇ ಉದ್ದೇಶಕ್ಕಾಗಿ ಎಂದಿಗೂ ಇರಿಸಬೇಡಿ ಅಥವಾ ಬಾಡಿಗೆಗೆ ತೆಗೆದುಕೊಳ್ಳಬೇಡಿ ಎಂದು ದೇವಸ್ಥಾನವು ಕರೆ ನೀಡಿದ್ದನ್ನು ಅನುಸರಿಸಿ, ಪೆಟಾ ಸಂಸ್ಥೆಯು ರೋಬೋಟಿಕ್ ಆನೆಯನ್ನು ನೀಡಿದೆ.

ರೋಬೋಟ್ ಆನೆ

ಯಾಂತ್ರಿಕ ಆನೆ ಬಳಸಲು ಕೋರಿಕೆ:ಕಳೆದ ಭಾನುವಾರ, ಇರಿಂಜದಪ್ಪಿಲ್ಲಿ ರಾಮನ್ ಅನ್ನು 'ನಡಾಯಿರುತಲ್' (ದೇವರಿಗೆ ಆನೆಗಳನ್ನು ಅರ್ಪಿಸುವ ಸಮಾರಂಭ) ನಡೆಸಲಾಯಿತು. ಅಲ್ಲದೇ ಕಾರ್ಯಕ್ರಮಗಳಲ್ಲಿ ನೈಜ ಆನೆಗಳ ಬದಲಿಗೆ ಯಾಂತ್ರಿಕ ಆನೆಗಳನ್ನು ಬಳಸಲು ಪೇಟಾ ಸಂಸ್ಥೆ ಕೋರಿದೆ. ಧಾರ್ಮಿಕ ಉತ್ಸವ ಹಾಗೂ ಸಂಪ್ರದಾಯದ ಹೆಸರಿನಲ್ಲಿ ಆನೆಗಳನ್ನು ಸೆರೆ ಹಿಡಿದು ಹಿಂಸಿಸಲಾಗುತ್ತಿದೆ ಎಂದು ಪ್ರಾಣಿ ದಯಾ ಸಂಸ್ಥೆ ಪೆಟಾ (PETA) ಮೊದಲಿನಿಂದಲೂ ದೂರುತ್ತಲೇ ಬಂದಿದೆ. ಆ ಸಂಸ್ಥೆಯ ಪ್ರಾಯೋಜಕತ್ವ ಪಡೆದು ಚಾಲಕ್ಕುಡಿ ಮೂಲದ ನಾಲ್ವರು ಯುವಕರು ರೋಬೋಟ್​​ ಆನೆಯನ್ನು ಅಭಿವೃದ್ಧಿಪಡಿಸಿದ್ದಾರೆ. 800 ಕೆಜಿ ತೂಗುವ ಈ ರೋಬೋಟ್​​ ಆನೆಯನ್ನು ರಬ್ಬರ್ ಕೋಟಿಂಗ್ ಜತೆಗೆ ಕಬ್ಬಿಣದ ಪ್ರೇಮ್ ಅಳವಡಿಸಿ ತಯಾರಿಸಲಾಗಿದೆ. ಕಿವಿ, ಬಾಲ, ತಲೆಯನ್ನು ಅಲ್ಲಾಡಿಸುತ್ತದೆ. 5 ಲಕ್ಷ ರೂ ಮೊತ್ತದಲ್ಲಿ ಈ ರೋಬೋಟ್​ ಆನೆಯನ್ನು ತಯಾರಿಸಲಾಗಿದೆ. ದೇಗುಲದಲ್ಲಿ ಮೆರವಣಿಗೆ ನಡೆಸುವ ವೇಳೆ ಈ ಆನೆಯ ಮೇಲೆ 4 ಮಂದಿ ಕುಳಿತುಕೊಳ್ಳಬಹುದಾಗಿದೆ.

ದೇವಾಲಯದಲ್ಲಿ ಸುರಕ್ಷಿತ ಮತ್ತು ಕ್ರೌರ್ಯ ಮುಕ್ತ ರೀತಿಯಲ್ಲಿ ಸಮಾರಂಭಗಳನ್ನು ನಡೆಸಲು ಇದು ಸಹಾಯ ಮಾಡುತ್ತದೆ. ಆ ಮೂಲಕ ನೈಜ ಆನೆಗಳ ಸೆರೆಯಲ್ಲಿನ ಭಯಾನಕತೆಯನ್ನು ಕೊನೆಗೊಳಿಸುತ್ತದೆ ಎಂದು ಪೆಟಾ ಪ್ರಕಟಣೆಯಲ್ಲಿ ತಿಳಿಸಿದೆ. ದೇವಸ್ಥಾನದ ಪ್ರಧಾನ ಅರ್ಚಕ ರಾಜಕುಮಾರ್ ನಂಬೂತಿರಿ ಮಾತನಾಡಿ, 'ಯಾಂತ್ರಿಕ ಆನೆಯನ್ನು ಸ್ವೀಕರಿಸಲು ಅತ್ಯಂತ ಸಂತೋಷವಾಗುತ್ತದೆ. ಇದು ಆಚರಣೆಗಳು ಮತ್ತು ಉತ್ಸವಗಳನ್ನು ಕ್ರೌರ್ಯ ಮುಕ್ತ ರೀತಿಯಲ್ಲಿ ನಡೆಸಲು ಸಹಾಯ ಮಾಡುತ್ತದೆ' ಎಂದು ಹೇಳಿದರು.

ಯಾಂತ್ರಿಕ ಆನೆ ಬಳಕೆಗೆ ಒತ್ತಾಯ: ಕೇರಳ ಸೇರಿದಂತೆ ದೇಶದಲ್ಲಿ ಸೆರೆಯಲ್ಲಿರುವ ಹೆಚ್ಚಿನ ಆನೆಗಳನ್ನು ಅಕ್ರಮವಾಗಿ ಹಿಡಿದಿಟ್ಟುಕೊಳ್ಳಲಾಗಿದೆ. ಅಲ್ಲದೇ ಅನುಮತಿಯಿಲ್ಲದೆ ಬೇರೆ ರಾಜ್ಯಕ್ಕೆ ಸಾಗಿಸಲಾಗಿದೆ ಎಂದು ಪೆಟಾ ಆರೋಪಿಸಿದೆ. ಹೆರಿಟೇಜ್ ಅನಿಮಲ್ ಟಾಸ್ಕ್ ಫೋರ್ಸ್ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 15 ವರ್ಷಗಳ ಅವಧಿಯಲ್ಲಿ ಕೇರಳದಲ್ಲಿ ಸೆರೆಯಾದ ಆನೆಗಳು 526 ಜನರನ್ನು ಕೊಂದಿವೆ. ಸುಮಾರು 40 ವರ್ಷಗಳಿಂದ ಸೆರೆಯಲ್ಲಿದ್ದ ತೆಚಿಕ್ಕಟ್ಟುಕಾವು ರಾಮಚಂದ್ರನ್, ಕೇರಳದ ಉತ್ಸವದಲ್ಲಿ ಹೆಚ್ಚಾಗಿ ಬಳಸುವ ಆನೆಗಳಲ್ಲಿ ಒಂದಾಗಿದೆ. ಇದು 13 ವ್ಯಕ್ತಿಗಳನ್ನು, 6 ಮಂದಿ ಮಾವುತರು, 4 ಮಹಿಳೆಯರು ಮತ್ತು 3 ಆನೆಗಳನ್ನು ಕೊಂದಿದೆ ಎಂದು ವರದಿಯಾಗಿದೆ. ಹಾಗಾಗಿ ಆನೆಗಳನ್ನು ಬಳಸುವ ಎಲ್ಲಾ ಸ್ಥಳಗಳು ಮತ್ತು ಕಾರ್ಯಕ್ರಮ‌ಗಳಲ್ಲಿ ನೈಜ ಆನೆಗಳ ಬದಲಿಗೆ ಯಾಂತ್ರಿಕ ಆನೆಗಳನ್ನು ಬಳಸುವಂತೆ ಒತ್ತಾಯಿಸಿದೆ.

ಇದನ್ನೂ ಓದಿ:ಆಟದ ಗೊಂಬೆಯೇ ಟೀಚರ್! ಮಕ್ಕಳಿಗೆ ಪಾಠ ಹೇಳಿಕೊಡುತ್ತೆ ಈ 'ಶಿಕ್ಷಾ' ರೋಬೋ

ABOUT THE AUTHOR

...view details