ತಿರುವನಂತಪುರಂ (ಕೇರಳ):ಹೈಯರ್ ಸೆಕೆಂಡರಿ ಪಠ್ಯ ಪುಸ್ತಕಗಳಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಕೈಬಿಟ್ಟಿರುವ ಆಯ್ದ ಭಾಗಗಳನ್ನು ಕೇರಳ ಪಠ್ಯಕ್ರಮದಲ್ಲಿ ಬೋಧಿಸಲಾಗುವುದು ಎಂದು ಕೇರಳ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ತಿಳಿಸಿದ್ದಾರೆ.
ಎನ್‌ಸಿಇಆರ್‌ಟಿ ಮಾಡಿರುವ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹೊಸ ಪಠ್ಯದಲ್ಲಿ ಮಹಾತ್ಮ ಗಾಂಧೀಜಿ ಮೃತಪಟ್ಟಿದ್ದಾರೆ ಎಂದು ಬಳಸಲಾಗಿದೆ. ಆದರೆ, ಗಾಂಧಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಜೊತೆಗೆ ವಿಕಾಸವಾದ ಸಿದ್ಧಾಂತ ಸೇರಿದಂತೆ ಅನೇಕ ವಿಷಯಗಳನ್ನು ಹೊರಗಿಡಲಾಗಿದೆ. ಈ ಕುರಿತು ಪಠ್ಯಕ್ರಮ ಸಮಿತಿಯು ವಿಸ್ತೃತವಾಗಿ ಚರ್ಚಿಸಿದೆ. ಇದರ ಬಳಿಕ ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ'' ಎಂದು ಹೇಳಿದರು.
ಇದನ್ನೂ ಓದಿ:ಪಿಯು ವಿಜ್ಞಾನ, ವಾಣಿಜ್ಯ ಪಠ್ಯದಲ್ಲಿ ಕಡಿತ: ಯಾವೆಲ್ಲ ವಿಷಯದಲ್ಲಿ ಕತ್ತರಿ?
"ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಇತಿಹಾಸ ಪಠ್ಯ ಪುಸ್ತಕಗಳಿಂದ ವ್ಯಾಪಕವಾಗಿ ಹಲವು ವಿಷಯಗಳನ್ನು ಕೈಬಿಡಲಾಗಿದೆ. ಆದರೆ, ನಮ್ಮ ಪಠ್ಯಕ್ರಮ ಸಮಿತಿಯ ಸಲಹೆಯು ಕೈಬಿಬಿಡಲಾದ ಪಾಠಗಳನ್ನು ಸೇರಿಸುವುದಾಗಿದೆ. ಇದರ ಸ್ವರೂಪವನ್ನು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು'' ಎಂದು ಮಾಹಿತಿ ನೀಡಿದರು.
ಇದೇ ವೇಳೆ, ''ಇಂತಹ ಬದಲಾಯಿಸಿದ ಇತಿಹಾಸವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ?. ಎನ್‌ಸಿಇಆರ್‌ಟಿ ಶಾಲಾ ಪಠ್ಯಪುಸ್ತಕಗಳಿಂದ ಮೊಘಲ್ ಇತಿಹಾಸ, ಗುಜರಾತ್ ಗಲಭೆಗಳು ಮತ್ತು ಚಾರ್ಲ್ಸ್ ಡಾರ್ವಿನ್‌ನ ವಿಕಾಸ ಸಿದ್ಧಾಂತವನ್ನು ತೆಗೆದುಹಾಕಲಾಗಿದೆ. ಈ ವಿಷಯಗಳನ್ನು ಬೋಧಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ ಹೊರತಾಗಿಯೂ, ರಾಜ್ಯ ಸರ್ಕಾರ ಸ್ವತಂತ್ರವಾಗಿ ಪಠ್ಯ ಪುಸ್ತಕಗಳನ್ನು ಮುದ್ರಿಸಬಹುದು'' ಎಂದು ಸಚಿವ ಶಿವನ್‌ಕುಟ್ಟಿ ಹೇಳಿದರು.
ಇದನ್ನೂ ಓದಿ:ಪಠ್ಯಕ್ರಮದಿಂದ ಹಿಂದೂ-ಮುಸ್ಲಿಂ, ಆರ್ಎಸ್ಎಸ್, ಗಾಂಧಿ ಮುಂತಾದ ಪಠ್ಯ ಕೈಬಿಟ್ಟ ಎನ್‌ಸಿಇಆರ್‌ಟಿ
ಕೇಂದ್ರ ಸರ್ಕಾರಕ್ಕೆ ಲಿಖಿತ ರೂಪದಲ್ಲಿ ಆಕ್ಷೇಪಣೆ: ಮುಂದುವರೆದು, ''ಎನ್‌ಸಿಇಆರ್‌ಟಿ ಕೈಬಿಟ್ಟಿರುವ ಭಾಗಗಳನ್ನು ಹೇಗೆ ಕಲಿಸಬೇಕು ಎಂಬುದನ್ನು ಕೇರಳ ಪರಿಶೀಲಿಸಲಿದೆ. ಈ ವಿಷಯಗಳಲ್ಲಿನ ಲೋಪದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಹ ತಿಳಿಸಲಾಗುವುದು'' ಎಂದು ತಿಳಿಸಿದರು. ''ಕೇರಳ ರಾಜ್ಯ ಸರ್ಕಾರವು ಸಾಂವಿಧಾನಿಕ ಮತ್ತು ಜಾತ್ಯತೀತ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಿ ಮುನ್ನಡೆಯುತ್ತಿದೆ. ಎನ್‌ಸಿಇಆರ್‌ಟಿ ಕೈಬಿಟ್ಟಿರುವ ಪಠ್ಯ ಪುಸಕ್ತದ ಭಾಗಗಳನ್ನು ಕಲಿಸುವ ಅಗತ್ಯವಿದೆ ಎಂದು ಶಿಕ್ಷಕರ ಸಂಘಗಳೂ ಅಭಿಪ್ರಾಯಪಟ್ಟಿವೆ'' ಎಂದರು.
ಎಸ್‌ಸಿಇಆರ್‌ಟಿ ಸಮಿತಿ ಸಭೆ: ಪಠ್ಯ ಪುಸ್ತಕ ಪರಿಷ್ಕರಣೆ ಕುರಿತಾಗಿ ಮಂಗಳವಾರ ಕೇರಳ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎಸ್‌ಸಿಇಆರ್‌ಟಿ)ಯ ಪಠ್ಯಕ್ರಮ ಸಂಚಾಲನಾ ಸಮಿತಿಯು ಮಹತ್ವದ ಸಭೆ ನಡೆಸಿದೆ. ಈ ಸಭೆ ನಂತರ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಕೈಬಿಟ್ಟಿರುವ ಭಾಗಗಳನ್ನು ರಾಜ್ಯ ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ನಿರ್ಧರಿಸಿದೆ ಎಂದು ಎಸ್‌ಸಿಇಆರ್‌ಟಿ ತನ್ನ ಹೇಳಿಕೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಒತ್ತಡ, ಮನವಿಗೆ ಪಠ್ಯ ಪರಿಷ್ಕರಣೆ ಮಾಡಿಲ್ಲ: ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್