ಎರ್ನಾಕುಲಂ (ಕೇರಳ):ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕೇರಳದ ಹಿರಿಯ ಪ್ರಚಾರಕ ಆರ್.ಹರಿ (93) ಇಂದು (ಭಾನುವಾರ) ಬೆಳಿಗ್ಗೆ ನಿಧನರಾದರು. ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಆಪ್ತ ಮೂಲಗಳು ತಿಳಿಸಿವೆ.
1930ರ ಡಿಸೆಂಬರ್ 5ರಂದು ಆರ್.ರಂಗ ಅವರು ಜನಿಸಿದ್ದರು. ರಂಗ ಶೆಣೈ ಮತ್ತು ಪದ್ಮಾವತಿ ದಂಪತಿಯ ಪುತ್ರರಾದ ಇವರ ಪೂರ್ಣ ಹೆಸರು ರಂಗ ಹರಿ. ಎಲ್ಲರೂ ಸಾಮಾನ್ಯವಾಗಿ ಆರ್.ಹರಿ ಎಂಬ ಹೆಸರಿನಲ್ಲೇ ಕರೆಯಲ್ಪಡುತ್ತಿದ್ದರು. ಸೇಂಟ್ ಆಲ್ಬರ್ಟ್ಸ್ ಮತ್ತು ಮಹಾರಾಜ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರು. ಆರ್‌ಎಸ್‌ಎಸ್‌ನ ಹಲವು ಪ್ರಮುಖ ಹುದ್ದೆಗಳಿಗೆ ತಲುಪಿದ ಕೇರಳದ ಮೊದಲ ಪ್ರಚಾರಕ ಎಂಬ ಖ್ಯಾತಿಯನ್ನು ಆರ್.ಹರಿ ಹೊಂದಿದ್ದರು.
1948ರಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ಆರ್‌ಎಸ್‌ಎಸ್ ನಿಷೇಧ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಕೆಲವು ತಿಂಗಳು ಕಾಲ ಹರಿ ಜೈಲುವಾಸ ಅನುಭವಿಸಿದ್ದರು. 1951ರಲ್ಲಿ ಪೂರ್ಣಾವಧಿಯ ಆರ್‌ಎಸ್‌ಎಸ್ ಕಾರ್ಯಕರ್ತರಾಗಿ ತಮ್ಮ ಸಾಮಾಜಿಕ, ರಾಜಕೀಯ ಜೀವನ ಪ್ರಾರಂಭಿಸಿದ್ದರು. ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಮುಖರಾಗಿಯೂ ಸೇವೆ ಸಲ್ಲಿಸಿದ್ದರು.
1989ರಲ್ಲಿ ಕೇರಳದಲ್ಲಿ ಆರ್‌ಎಸ್‌ಎಸ್‌ನ ಪ್ರಾಂತ ಪ್ರಚಾರಕ, 1990ರಲ್ಲಿ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ, ಇದಾದ ಒಂದು ವರ್ಷದ ನಂತರ ಬೌದ್ಧಿಕ್ ಪ್ರಮುಖ ಆಗಿಯೂ ನೇಮಕಗೊಂಡಿದ್ದು, 2005ರವರೆಗೆ ಇದೇ ಹುದ್ದೆಯನ್ನು ನಿರ್ವಹಿಸಿದ್ದರು. ತಮ್ಮ 75ನೇ ವಯಸ್ಸಿನಲ್ಲಿ ಆರ್.ಹರಿ ಸಂಘದ ನಿಯಮಗಳ ಪ್ರಕಾರ ತಮ್ಮ ಎಲ್ಲ ಅಧಿಕೃತ ಕರ್ತವ್ಯಗಳನ್ನು ತ್ಯಜಿಸಿದ್ದರು. ಪ್ರಸಿದ್ಧ ಬರಹಗಾರರೂ ಆಗಿದ್ದು ವಿವಿಧ ಭಾಷೆಗಳಲ್ಲಿ ಸುಮಾರು 60 ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಸಂಘದ ಪ್ರಮುಖರ ಸಂತಾಪ:ಆರ್.ಹರಿ ನಿಧನಕ್ಕೆ ಆರ್‌ಎಸ್‌ಎಸ್‌ನ ಸರಸಂಘಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ್ ದತ್ತಾತ್ರೇಯ ಹೊಸಬಾಳೆ ಸಂತಾಪ ಸೂಚಿಸಿದ್ದಾರೆ. ರಂಗ ಹರಿ ಜಿಯವರ ದುಃಖದ ನಿಧನವು ನಮಗೆ ಆಳವಾದ ಚಿಂತಕ, ಪ್ರಾಯೋಗಿಕ ಕೆಲಸಗಾರ ಮತ್ತು ಆದರ್ಶಕ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಯ ಮತ್ತು ಪ್ರೋತ್ಸಾಹಿಸುವ ಹಿರಿಯರನ್ನು ಕಸಿದುಕೊಂಡಿದೆ. ಅವರು ಅರ್ಥಪೂರ್ಣವಾಗಿ ಜೀವಿಸಿದ್ದರು. ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಬೌದ್ಧಿಕ ಪ್ರಮುಖರಾಗಿದ್ದಾಗ ಅವರ ಪರಿಚಯಕ್ಕೆ ಬಂದ ಅನೇಕ ಕಾರ್ಯಕರ್ತರು ಇಂದು ಭಾರತದಾದ್ಯಂತ ಅವರ ಅಗಲಿಕೆಗೆ ಶೋಕ ವ್ಯಕ್ತಪಡಿಸುತ್ತಿದ್ದಾರೆ.
ತಮ್ಮ ಅನಾರೋಗ್ಯದ ದಿನಗಳಲ್ಲಿಯೂ ಸಹ ಅವರ ಕೊನೆಯ ದಿನಗಳಲ್ಲಿ ಅವರು ತಮ್ಮ ಕ್ಷಿಣಿಸಿದ ಶಕ್ತಿಯ ಬಗ್ಗೆ ತಿಳಿದಿದ್ದರು. ಆದರೆ, ಅವರು ಓದುವ, ಬರೆಯುವ ಮತ್ತು ಅವರನ್ನು ನೋಡಲು ಬಂದ ಸ್ವಯಂಸೇವಕರನ್ನು ಆಹ್ಲಾದಕರವಾಗಿ ಸಮಾಲೋಚಿಸುವ ಚಟುವಟಿಕೆಗಳನ್ನು ಕಡಿಮೆ ಮಾಡಲಿಲ್ಲ. ವೈಯಕ್ತಿಕವಾಗಿ ಮತ್ತು ಆರ್‌ಎಸ್‌ಎಸ್ ಪರವಾಗಿ ಅವರ ಸ್ಪೂರ್ತಿದಾಯಕ ಸ್ಮರಣೆಗೆ ನನ್ನ ಗೌರವ ಸಂತಾಪ ಅರ್ಪಿಸುತ್ತೇನೆ ಮತ್ತು ಅಗಲಿದ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥಿಸುತ್ತೇವೆ ಎಂದು ಆರ್‌ಎಸ್‌ಎಸ್ ಅಧಿಕೃತ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ:ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಮದನ್ ದಾಸ್ ದೇವಿ ನಿಧನ: ಪ್ರಧಾನಿ ಮೋದಿ, ಮೋಹನ್ ಭಾಗವತ್ ಸೇರಿ ಗಣ್ಯರ ಸಂತಾಪ