ಪತ್ತನಂತಿಟ್ಟ(ತಿರುವನಂತಪುರಂ) :ಇದು ಅಪರೂಪದ ಆಯುರ್ವೇದ ಗಿಡಮೂಲಿಕೆಗಳ ಪರಿಮಳ ಪಸರಿಸುವ ಮನೆ. ವಿದ್ಯುತ್ ಸಂಪರ್ಕ ಹೊಂದಿರದಿದ್ದರೂ, ಹವಾನಿಯಂತ್ರಿತ ಕೊಠಡಿಯಷ್ಟೇ (AC)ಯಷ್ಟೇ ತಂಪಾಗಿರುತ್ತದೆ. 65ಕ್ಕೂ ಹೆಚ್ಚು ಆಯುರ್ವೇದ ಗಿಡಮೂಲಿಕೆಗಳೊಂದಿಗೆ ಮಿಶ್ರಣ ಮಾಡಿದ ಜೇಡಿಮಣ್ಣಿನಿಂದ ನಿರ್ಮಿಸಲಾದ ಮನೆ ಇದಾಗಿದೆ.
ಮಣ್ಣು ಹಾಗೂ ಗಿಡಮೂಲಿಕೆ ಸಸ್ಯಗಳಿಂದ ನಿರ್ಮಿಸಲಾದ ಮನೆ.. ವೃತ್ತಿಯಲ್ಲಿ ಶಿಲ್ಪಿಯಾಗಿರುವ ಸಂತೋಷ್ ಎಂಬುವರು 200 ಚದರ ಅಡಿ ವಿಸ್ತೀರ್ಣದಲ್ಲಿ ಈ ವಿಶಿಷ್ಟ ಮನೆ ನಿರ್ಮಿಸಿದ್ದಾರೆ. ರಾಜ್ಯ ರಾಜಧಾನಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಅಡೂರಿನಲ್ಲಿ ಅವರ ಆತ್ಮೀಯ ಸ್ನೇಹಿತ ಜಾಕೋಬ್ ತಂಕಚನ್ ಅವರ 5 ಎಕರೆ ಕೃಷಿ ಭೂಮಿಯಲ್ಲಿ ಈ ಮನೆಯಿದೆ.
ಎರ್ನಾಕುಲಂ ಮೂಲದ ಜೇಕಬ್ ತಂಗಚನ್ ಅವರ ಒಡೆತನದಲ್ಲಿ 'ಮೃಣ್ಮಯಂ' ಮನೆಯನ್ನು ಸಂಪೂರ್ಣ ಗಿಡಮೂಲಿಕೆ ಮಿಶ್ರಿತ ಮಣ್ಣಿನಲ್ಲಿ ನಿರ್ಮಿಸಲಾಗಿದೆ. ಜೇಡಿಮಣ್ಣು ಮತ್ತು ಗಿಡಮೂಲಿಕೆಗಳ ಜತೆಗೆ ಸ್ನೇಕ್‌ಹೆಡ್ ಮೀನಿನ ಕೊಬ್ಬನ್ನು ಬೆರೆಸಲಾಗಿದೆ.
ಸ್ನೇಕ್‌ಹೆಡ್ ಮೀನುಗಳನ್ನು ತೊಟ್ಟಿಯಲ್ಲಿ ಇರಿಸಿದಾಗ ಅದರ ಕೊಬ್ಬು ನೀರನ್ನು ದಪ್ಪವಾಗಿಸುತ್ತದೆ. ಈ ನೀರನ್ನು ಗಿಡಮೂಲಿಕೆಗಳೊಂದಿಗೆ ಜೇಡಿಮಣ್ಣನ್ನು ಬೆರೆಸಲು ಬಳಸಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಂತೋಷ್, ಶಿಲ್ಪಕಲೆಯಲ್ಲಿ ವಿಶೇಷವಾಗಿ ದೇವಾಲಯಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕುಟುಂಬಕ್ಕೆ ನಾನು ಸೇರಿದವನು. "ನನಗೆ ಯಾವಾಗಲೂ ವಿವಿಧ ಗಿಡಮೂಲಿಕೆಗಳು, ವಿಶೇಷವಾಗಿ ಔಷಧೀಯ ಗಿಡಮೂಲಿಕೆಗಳ ಮೇಲೆ ಪ್ರೀತಿ ಇತ್ತು.
ಕಳೆದ 6 ವರ್ಷಗಳಿಂದ, ನಾನು ಸಂಶೋಧನೆ ನಡೆಸುತ್ತಿದ್ದೇನೆ. ವಿವಿಧ ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯವನ್ನು ಬೆರೆಸಿ ಮತ್ತು ಅದರ ಸಾಂದ್ರತೆಯನ್ನು ಪರೀಕ್ಷಿಸುವುದರ ಜತೆಗೆ ಅದನ್ನು ಮಣ್ಣಿನೊಂದಿಗೆ ಬೆರೆಸುತ್ತೇನೆ" ಎಂದು ಹೇಳಿದರು.
40 ಮಂದಿ ತಜ್ಞರೊಂದಿಗೆ ಮಾತುಕತೆ :ಸಂತೋಷ್ ಅವರು ಮನೆ ನಿರ್ಮಿಸುವ ಮೊದಲು ಆಯುರ್ವೇದ ಮತ್ತು ಗಿಡಮೂಲಿಕೆ ಸಸ್ಯಗಳ ಸುಮಾರು 40 ವಿವಿಧ ತಜ್ಞರೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು. ನಾನು ನನ್ನ ಸಂಶೋಧನೆಯ ಸಂಪೂರ್ಣ ಮಾಹಿತಿಯನ್ನು ತಂಕಾಚೆನ್ ಅವರಿಗೆ ತೋರಿಸಿದೆ.
ಅವರು ತಕ್ಷಣವೇ ಅವರ ಜಮೀನಿನಲ್ಲಿ ಮನೆಯನ್ನು ನಿರ್ಮಿಸಲು ಒಪ್ಪಿಕೊಂಡರು. ಮನೆ ನಿರ್ಮಿಸಲು ಸುಮಾರು ಒಂದು ವರ್ಷ ಬೇಕಾಯಿತು. ಮನೆ ಈಗ ಗಿಡಮೂಲಿಕೆಗಳ ಪರಿಮಳದಿಂದ ಕೂಡಿದೆ. ತುಂಬಾ ತಂಪಾಗಿರುವುದರಿಂದ ಫ್ಯಾನ್ ಅಗತ್ಯವಿಲ್ಲ. ಈಗ ಇದು ಹೆಚ್ಚಿನ ಪ್ರಯೋಗಗಳನ್ನು ನಡೆಸಲು ಪ್ರೇರಣೆಯಾಗಿದೆ ಎಂದು ಸಂತೋಷ್ ಹೇಳಿದರು.
ಮಾಲೀಕ ಜೇಕಬ್ ತಂಗಚನ್ ಮಾತನಾಡಿ, ಕೆಲಸ ಸಂಬಂಧಿತ ಒತ್ತಡದಿಂದ ದೂರವಿರಲು ಈ ಮನೆ ಹೆಚ್ಚು ಪ್ರಯೋಜನಕಾರಿ. ಮನೆ ತಂಪಾಗಿರುವುದರಿಂದ ನಮಗೆ ಫ್ಯಾನ್ ಕೂಡ ಅಗತ್ಯವಿಲ್ಲ. ಜತೆಗೆ ಸೊಗಸಾದ ಸುವಾಸನೆಯನ್ನು ಅತ್ಯಂತ ವಿಶ್ರಾಂತಿಯ ಅನುಭವ ನೀಡುತ್ತದೆ ಎಂದರು.
ಜೇಡಿಮಣ್ಣಿನ ಜತೆಗೆ ಗಿಡಮೂಲಿಕೆಗಳನ್ನು ಮಿಶ್ರಣ ಮಾಡಲು ವಿಭಿನ್ನ ಅಂಶಗಳು ಕಾರಣ ಎಂದು ಸಂತೋಷ್ ಹೇಳುತ್ತಾರೆ.
- ತಂಪಾದ ಒಳಾಂಗಣ ಮತ್ತು ಸುಗಂಧವನ್ನು ನೀಡುವುದು ಮುಖ್ಯ ಗುರಿಯಾಗಿದೆ.
- ಗೆದ್ದಲುಗಳನ್ನು ತಡೆಗಟ್ಟಲು ಕೆಲವು ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ ಮತ್ತು ಕೆಲವು ಜೇಡಿಮಣ್ಣನ್ನು ಬಲಪಡಿಸಲು ಬಳಸಲಾಗುತ್ತದೆ ಎಂದಿದ್ದಾರೆ.
ಸದ್ಯ ಈ ಮನೆ ನಿರ್ಮಾಣದ ಎಲ್ಲಾ ಹಂತಗಳು ಮುಕ್ತಾಯವಾಗಿದ್ದು, ಅದನ್ನು ವಿಶ್ವದಾಖಲೆಗೆ ಸೇರಿಸಲು ಯೋಜಿಸುತ್ತಿದ್ದಾರೆ.