ತಿರುವನಂತಪುರಂ(ಕೇರಳ):ಕಳೆದ ಕೆಲ ದಿನಗಳಿಂದ ಕೇರಳದಲ್ಲಿ ಕೊರೊನಾ ಹಾವಳಿ ಜೋರಾಗಿದ್ದು, ನಿತ್ಯ ಸಾವಿರಾರು ಹೊಸ ಸೋಂಕಿತ ಪ್ರಕರಣ ದೃಢಪಡುತ್ತಿವೆ. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಕೋವಿಡ್ ವ್ಯಾಕ್ಸಿನ್ ಎರಡು ಡೋಸ್ ಪಡೆದುಕೊಂಡಿರುವ 40 ಸಾವಿರ ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಕೇಂದ್ರ ಆರೋಗ್ಯ ಇಲಾಖೆ ತಂಡ ಇಲ್ಲಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹ ಮಾಡಿದಾಗ ಈ ಸತ್ಯಾಂಶ ತಿಳಿದು ಬಂದಿದೆ. ಪ್ರಮುಖವಾಗಿ ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡಿರುವವರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಹಾಕಿಕೊಳ್ಳದೇ ಇರುವುದು ಇದಕ್ಕೆ ಮುಖ್ಯ ಕಾರಣ ಎಂದು ವರದಿಯಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ(ICMR) ಇಲಾಖೆಯಿಂದಲೇ ಈ ಮಾಹಿತಿ ಬಹಿರಂಗಗೊಂಡಿದ್ದು, ಈ ಸೋಂಕಿತರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಇದೀಗ ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದೆ ಎಂದು ವರದಿಯಾಗಿದೆ. ಕೋವಿಡ್ ಲಸಿಕೆ ಪಡೆದಿರುವ ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅಲ್ಲಿನ ಆರೋಗ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಇದೇ ಕಾರಣಕ್ಕಾಗಿ ಕೇರಳದಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಅಲ್ಲಿನ ಸರ್ಕಾರ ಮುಂದಾಗಿದೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಲಸಿಕೆ ಪಡೆದುಕೊಂಡಿರುವ 20 ಸಾವಿರ ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.