ತಿರುವನಂತಪುರಂ (ಕೇರಳ): ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹಲವೆಡೆ ಭೂಕುಸಿತ ಸಂಭವಿಸಿದೆ.
ನಿನ್ನೆ ಸಂಜೆ ವೇಳೆಗೆ ಕೇರಳದ ಉತ್ತರ ಭಾಗದಲ್ಲಿ ವರುಣ ಮತ್ತಷ್ಟು ಆರ್ಭಟಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಅದರಂತೆ ನಿನ್ನೆ ಸಂಜೆಯಿಂದ ವರುಣ ಅಬ್ಬರಿಸುತ್ತಿದ್ದಾನೆ. ಪರಿಣಾಮ, ಪ್ರವಾಹ ಹಾಗೂ ಭೂಕುಸಿತದಿಂದಾಗಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಭೀಕರ ಪ್ರವಾಹಕ್ಕೆ ಕೇರಳ ತತ್ತರ ಕೊಚ್ಚಿ ಹೋಗಿದ್ದ ಇಬ್ಬರು ಯುವಕರ ರಕ್ಷಣೆ:
ಕೊಟ್ಟಾಯಂ ಜಿಲ್ಲೆಯ ಮಣಿಮಾಲಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಯುವಕರನ್ನು ಸ್ಥಳೀಯರು ರಕ್ಷಿಸಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಮಣಿಮಾಲಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಮನೆಗಳಿಗೆ ನೀರು ನುಗ್ಗಿದೆ. ಮಲ್ಲಪ್ಪಲ್ಲಿ ನಿವಾಸಿಗಳಾದ ಸಾಜಿ ಮತ್ತು ಮನೋಜ್ ಕುಮಾರ್ ಎಂಬವರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಬಳಿಕ ಸ್ಥಳೀಯರು ಮಲ್ಲಪ್ಪಳ್ಳಿ ಸೇತುವೆಯ ಮೇಲೆ ಹತ್ತಿ ಹರಸಾಹಸ ಮಾಡಿ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಮೀನಾಚಿಲ್ ನದಿ ಕೂಡ ತುಂಬಿ ಹರಿಯುತ್ತಿದ್ದು, ಮನೆಗಳು ಸಂಪೂರ್ಣ ಜಲಾವೃತವಾಗಿದೆ.
ಶೋಧ-ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಇದನ್ನೂ ಓದಿ: ದೇವರನಾಡಿನಲ್ಲಿ ವರುಣನ ರೌದ್ರ ನರ್ತನ: ಒಂದೇ ಕುಟುಂಬದ 6 ಮಂದಿ ಸಾವು, ಹಲವೆಡೆ ದುರಂತ
ಶೋಧ-ರಕ್ಷಣಾ ಕಾರ್ಯಾಚರಣೆ:
ಪ್ರವಾಹ ಹಾಗೂ ಭೂಕುಸಿತದಲ್ಲಿ ಸಿಲುಕಿದವರ ಶೋಧ-ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಕೊಟ್ಟಾಯಂ, ಇಡುಕ್ಕಿಯಲ್ಲಿ ಭೂಕುಸಿತದಿಂದಾಗಿ ಹಲವು ಮಂದಿ ನಾಪತ್ತೆಯಾಗಿದ್ದರು. ಇದೀಗ ಮತ್ತೆ 12 ಮೃತದೇಹಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 21ಕ್ಕೆ ಹೆಚ್ಚಳವಾಗಿದೆ.
ಪರಿಹಾರ-ರಕ್ಷಣಾ ಕಾರ್ಯಾಚರಣೆ ಬಂದ Mi-17 ಹೆಲಿಕಾಪ್ಟರ್ಗಳು ಎನ್‌ಡಿಆರ್‌ಎಫ್ ತಂಡ ಈಗಾಗಲೇ ಕೇರಳದ ಹಲವೆಡೆ ಕಾರ್ಯಾಚರಣೆ ಕೈಗೊಂಡಿದ್ದು, ಭೂಕುಸಿತದ ಅವಶೇಷಗಳಲ್ಲಿ ಕಾಣೆಯಾದವರನ್ನು ರಕ್ಷಿಸಲು ಭಾರತೀಯ ಸೇನೆ ಕೂಡ ಕೈ ಜೋಡಿಸಿದೆ. ರಕ್ಷಣಾ-ಪರಿಹಾರ ಕಾರ್ಯಾಚರಣೆಗಾಗಿ ಎರಡು Mi-17 ಹೆಲಿಕಾಪ್ಟರ್ಗಳನ್ನು ಭಾರತೀಯ ವಾಯುಪಡೆ ಕಳುಹಿಸಿದೆ. ಬೆಂಗಳೂರಿನಿಂದ ಎಂಜಿನಿಯರಿಂಗ್ ಟಾಸ್ಕ್ ಫೋರ್ಸ್ ಶೀಘ್ರದಲ್ಲೇ ವಯನಾಡಿಗೆ ಆಗಮಿಸುವ ನಿರೀಕ್ಷೆ ಇದೆ ಎಂದು ಡಿಫೆನ್ಸ್ ಪಿಆರ್ಒ ತಿಳಿಸಿದ್ದಾರೆ.
11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್:
ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಕೊಟ್ಟಾಯಂ, ಅಲಪ್ಪುಳ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ ಮತ್ತು ಕೋಯಿಕ್ಕೋಡ್ - ಈ ಹನ್ನೊಂದು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಿದೆ.
ಅಮಿತ್ ಶಾ ಟ್ವೀಟ್
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಭಾರೀ ಮಳೆ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಕೇರಳದ ಕೆಲವು ಭಾಗಗಳಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ನಾವು ಗಮನಿಸುತ್ತಿದ್ದೇವೆ. ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಬೆಂಬಲವನ್ನು ನೀಡುತ್ತದೆ. ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಎನ್‌ಡಿಆರ್‌ಎಫ್ ತಂಡಗಳನ್ನು ಈಗಾಗಲೇ ಕಳುಹಿಸಲಾಗಿದೆ. ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುವೆ" ಎಂದು ಹೇಳಿದ್ದಾರೆ.