ತಿರುವನಂತಪುರಂ (ಕೇರಳ) :ಕೇರಳದಲ್ಲಿ ಮಳೆ ಸಂಬಂಧಿತ ಅನಾಹುತಗಳಲ್ಲಿ ಸಾವಿನ ಸಂಖ್ಯೆ 33ಕ್ಕೆ ಏರಿದೆ. ಇಡುಕ್ಕಿಯ ಕೊಕ್ಕಾಯಾರ್ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಏಳು ಮಂದಿ ಮತ್ತು ಕೊಟ್ಟಾಯಂನ ಕುಟ್ಟಿಕ್ಕಲ್ನಲ್ಲಿ ಭೂಕುಸಿತದಲ್ಲಿ 12 ಜನ ಸಾವನ್ನಪ್ಪಿದ್ದಾರೆ. ಕೇಂದ್ರ ಮತ್ತು ರಾಜ್ಯ ಪಡೆಗಳ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಶವಗಳನ್ನು ಪತ್ತೆ ಮಾಡಲಾಗಿದೆ.
ಮಳೆ ಸಂಬಂಧಿತ ಅಪಘಾತಗಳಿಂದ ವಿವಿಧ ಸ್ಥಳಗಳಲ್ಲಿ ಇತರ ಸಾವು-ನೋವು ವರದಿಯಾಗಿವೆ. ಒಟ್ಟಾರೆ, 11 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳನ್ನು ಪತ್ತನಂತಿಟ್ಟ, ಆಲಪ್ಪುಳ, ಇಡುಕ್ಕಿ, ಎರನಕುಲಂ, ತ್ರಿಶೂರ್ ಮತ್ತು ಮಲಪ್ಪುರಂನಲ್ಲಿ ನಿಯೋಜಿಸಲಾಗಿದೆ.
ಒಂದು ಸೇನಾ ಘಟಕವನ್ನು ತಿರುವನಂತಪುರಂನಲ್ಲಿ ಮತ್ತು ಇನ್ನೊಂದು ಕೊಟ್ಟಾಯಂನಲ್ಲಿ ಇರಿಸಲಾಗಿದೆ. ತುರ್ತು ಸಹಾಯಕ್ಕಾಗಿ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳನ್ನು ತಿರುವನಂತಪುರಂ ಮತ್ತು ಕೊಚ್ಚಿಯಲ್ಲಿ ಸಿದ್ಧಗೊಳಿಸಲಾಗಿದೆ. ಈ ಹಿಂದೆ ಪಾಲಕ್ಕಾಡ್ನಲ್ಲಿ ನಿಯೋಜಿಸಲಾಗಿದ್ದ ಒಂದು ತಂಡವನ್ನು ಇರುಕ್ಕಿ ಮತ್ತು ಇಡಮಲಯಾರ್ ಅಣೆಕಟ್ಟುಗಳು ತೆರೆದ ನಂತರ ಎರನಕುಲಕ್ಕೆ ಸ್ಥಳಾಂತರಿಸಲಾಯಿತು.
ಅಕ್ಟೋಬರ್ 20 ರಿಂದ 24ರವರೆಗೆ ರಾಜ್ಯದಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ), ಮಂಗಳವಾರ ಬೆಳಗ್ಗೆ 11 ಗಂಟೆಗೆ ಇಡುಕ್ಕಿ ಅಣೆಕಟ್ಟಿನ ಬಾಗಿಲುಗಳನ್ನು ತೆರೆಯಲಾಯಿತು. ಇಡಲ್ಮಲಯಾರ್ ಮತ್ತು ಪಂಬಾ ಅಣೆಕಟ್ಟುಗಳ ಸ್ಲ್ಯೂಸ್‌ಗಳನ್ನು ದಿನದ ಮುಂಚೆಯೇ ತೆರೆಯಲಾಯಿತು.
ಇಡುಕ್ಕಿ ಅಣೆಕಟ್ಟಿನಿಂದ ಪೆರಿಯಾರ್ ನದಿಗೆ ಬಿಡಲಾದ ನೀರು ನಾಲ್ಕರಿಂದ ಆರು ಗಂಟೆಗಳಲ್ಲಿ ಕಾಲಡಿ-ಆಲುವಾ ಪ್ರದೇಶವನ್ನು ತಲುಪುವ ಸಾಧ್ಯತೆಯಿದೆ. ಇಡಮಲಯಾರ್‌ನಿಂದ ಹರಿಯುವ ನೀರು ಮಧ್ಯಾಹ್ನ 12ರ ವೇಳೆಗೆ ಕಾಲಡಿ-ಆಲುವಾ ಪ್ರದೇಶವನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ.
ಅಣೆಕಟ್ಟೆಯಿಂದ ನೀರು ಧುಮ್ಮಿಕ್ಕುವುದರಿಂದ ಪೆರಿಯಾರ್ ನದಿಯಲ್ಲಿ ನೀರಿನ ಮಟ್ಟವು ಒಂದು ಮೀಟರ್ ಹೆಚ್ಚಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ಸೂಚಿಸಲಾಗಿದೆ.
ಜನರಲ್ಲಿ ನೀರಿನ ಮಟ್ಟ ಏರಿಕೆಯ ನವೀಕರಣಗಳನ್ನು ಪ್ರಸಾರ ಮಾಡುವ ತಂತ್ರಗಳು ಈಗಾಗಲೇ ಜಾರಿಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಶಿಬಿರಗಳನ್ನು ಸಿದ್ಧಗೊಳಿಸಲಾಗಿದೆ. ಪೊಲೀಸ್, ಕಂದಾಯ ಮತ್ತು ಸ್ಥಳೀಯ ಸಂಸ್ಥೆಗಳ ಇಲಾಖೆಗಳು ಜಂಟಿಯಾಗಿ ನಿರ್ವಹಣೆಯನ್ನು ಸಂಯೋಜಿಸುತ್ತವೆ.
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಡಾ.ದಿವ್ಯಾ ಎಸ್.ಅಯ್ಯರ್ ಅವರು ಅಣೆಕಟ್ಟಿನ ಬಾಗಿಲುಗಳನ್ನು ತೆರೆಯಲು ಆದೇಶಿಸಿದರು. ಮಂಗಳವಾರ ಬೆಳಗ್ಗೆ 6 ಗಂಟೆಗೆ ಇಡಮಲಯಾರ್‌ನ ಎರಡು ಬಾಗಿಲುಗಳನ್ನು ತಲಾ 50 ಸೆಂ.ಮೀ. ಮೂಲಕ ತೆರೆಯಲಾಯಿತು.
ನೀರಿನ ಹರಿವಿನ ವೇಗ ಪ್ರತಿ ಸೆಕೆಂಡಿಗೆ 100 ಘನ ಸೆಂಟಿಮೀಟರ್‌ಗಳಷ್ಟು ಇರುತ್ತದೆ. ಕೇರಳ ರಾಜ್ಯ ವಿದ್ಯುತ್ ಮಂಡಳಿಯ (ಕೆಎಸ್‌ಇಬಿ) ಸೀಮಿತವಾದ ಶಂಬರಿಗಿರಿ ಯೋಜನೆಯ ಪಂಬಾ ಅಣೆಕಟ್ಟಿನ ಎರಡು ಶಟರ್‌ಗಳು ತಲಾ 30 ಸೆಂ.ಮೀ.ನಿಂದ ತೆರೆಯಲಾಗಿದೆ ಎಂದು ಹೇಳಿದರು.
ಪಂಪಾ ನದಿಯಲ್ಲಿ ನೀರಿನ ಮಟ್ಟವು 10 ಸೆಂಟಿಮೀಟರ್‌ಗಿಂತ ಹೆಚ್ಚಾಗದಂತೆ ಶಟರ್‌ಗಳನ್ನು 25 ಸೆಂಟಿಮೀಟರ್‌ಗಳಿಂದ ಗರಿಷ್ಠ 50 ಘನ ಸೆಂಟಿಮೀಟರ್‌ಗಳವರೆಗೆ ಕ್ರಮೇಣವಾಗಿ ತೆರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಪಾ ನದಿಯಲ್ಲಿ ಬಿಡುಗಡೆಯಾದ ನೀರು ಆರು ಗಂಟೆಗಳ ನಂತರ ಪಂಪಾ ತ್ರಿವೇಣಿಗೆ ತಲುಪುತ್ತದೆ. ಆದ ಕಾರಣ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಜಾಗರೂಕರಾಗಿರಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಈವರೆಗೆ, ರಾಜ್ಯವು 281 ಪರಿಹಾರ ಶಿಬಿರಗಳನ್ನು ತೆರೆದಿದೆ. ಮುಖ್ಯವಾಗಿ ಅಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ 10,956 ಜನರಿಗೆ ಸೇವೆ ಒದಗಿಸುತ್ತಿದೆ. ಅಗತ್ಯವಿದ್ದರೆ ಹೆಚ್ಚಿನ ಪರಿಹಾರ ಶಿಬಿರಗಳನ್ನು ತೆರೆಯಲಾಗುವುದು ಮತ್ತು ಈ ಶಿಬಿರಗಳಲ್ಲಿ ಎಲ್ಲಾ ಮೂಲ ಸೌಕರ್ಯ ಅಗತ್ಯಗಳನ್ನು ನೋಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿದೆ. ಮಳೆಗೆ 27 ಜೀವಗಳು ಬಲಿಯಾಗಿವೆ. ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಾರ, ಕೊಟ್ಟಾಯಂ ಜಿಲ್ಲೆಯ ಭೂಕುಸಿತದಿಂದ ಕೂಟ್ಟಿಕಲ್ನಿಂದ 14 ಮತ್ತು ಇಡುಕ್ಕಿಯ ಕೊಕ್ಕಾಯಾರ್ನಿಂದ 9 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ರಾಜ್ಯದಲ್ಲಿ ನಾಲ್ಕು ಮಂದಿ ಮುಳುಗಿ ಸಾವನ್ನಪ್ಪಿದ್ದಾರೆ.