ಕೊಚ್ಚಿ (ಕೇರಳ) :ತೊಡುಪುಳದಲ್ಲಿ ಪ್ರಾಧ್ಯಾಪಕರೊಬ್ಬರ ಕೈ ಕಡಿದ ಪ್ರಕರಣದ ಮೊದಲ ಆರೋಪಿ ಸವದ್ ಮೀರನಕುಟ್ಟಿ (38) ಎಂಬಾತನನ್ನು 13 ವರ್ಷಗಳ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಎನ್‌ಐಎ ಫ್ಯುಗಿಟಿವ್ ಟ್ರ್ಯಾಕಿಂಗ್ ತಂಡ ಮಂಗಳವಾರ ರಾತ್ರಿ ಮಟ್ಟನ್ನೂರಿನಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿ ಸವಾದ್‌ನನ್ನು ಬಂಧನಕ್ಕೆ ಒಳಪಡಿಸಿದೆ. 2023ರಲ್ಲಿ ಸವಾದ್ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ನೀಡಿದರೆ ಸಾರ್ವಜನಿಕರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನು ನೀಡುವುದಾಗಿ ತನಿಖಾ ಸಂಸ್ಥೆ ಘೋಷಿಸಿತ್ತು.
ಸವಾದ್ ಎರ್ನಾಕುಲಂ ಜಿಲ್ಲೆಯ ಅಸಮನ್ನೂರ್ ಗ್ರಾಮದವರು. ಜುಲೈ 4, 2010 ರಂದು ತೊಡುಪುಳದ ನ್ಯೂಮನ್ ಕಾಲೇಜಿನಲ್ಲಿ ನಡೆದ ಘಟನೆಯಿಂದ ಅವರು ತಲೆಮರೆಸಿಕೊಂಡಿದ್ದರು. ವರದಿಗಳ ಪ್ರಕಾರ, ಸವದ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI)ದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮಾರ್ಚ್ 23, 2010 ರಂದು, ನ್ಯೂಮನ್ ಕಾಲೇಜಿನಲ್ಲಿ ಬಿ. ಕಾಂ ಸೆಮಿಸ್ಟರ್ ಪರೀಕ್ಷೆಯಲ್ಲಿ ಧರ್ಮನಿಂದೆಯ ಪ್ರಶ್ನೆ ಕೇಳಿದ್ದಾರೆ ಎಂಬ ಆರೋಪದ ಮೇಲೆ ಅವರ ಪಕ್ಷದ ಸದಸ್ಯರು ಪ್ರೊಫೆಸರ್ ಜೋಸೆಫ್ ಅವರ ಕೈ ಕತ್ತರಿಸಿದ್ದರು. ಮುವಾಟ್ಟುಪುಳದ ಚರ್ಚ್‌ನಲ್ಲಿ ಭಾನುವಾರದ ಸಾಮೂಹಿಕ ಪೂಜೆಯಲ್ಲಿ ಪಾಲ್ಗೊಂಡು ಕುಟುಂಬದೊಂದಿಗೆ ಮನೆಗೆ ಹಿಂದಿರುಗುತ್ತಿದ್ದ ಪ್ರೊಫೆಸರ್ ಅವರ ಕೈಯನ್ನು ಆರೋಪಿಗಳು ಕತ್ತರಿಸಿದ್ದರು.