ಕೊಲ್ಲಂ(ಕೇರಳ): ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಭಾನುವಾರ ದೇಶಾದ್ಯಂತ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣೆಯ ಹೆಸರಿನಲ್ಲಿ ನಾಚಿಕೆಗೇಡಿನ ಘಟನೆ ನಡೆದಿದೆ. ಈ ಸಂಬಂಧ ಇದೀಗ ಕೊಲ್ಲಂ ಪೊಲೀಸರು ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ಜಿಲ್ಲೆಯ ಆಯೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನೀಟ್ ಪರೀಕ್ಷೆಗೆ ಹಾಜರಾಗುವಾಗ ತಾನು ಎದುರಿಸಿದ ಅವಮಾನಕರ ಸನ್ನಿವೇಶವನ್ನು ಬಾಲಕಿ ಠಾಣೆಯಲ್ಲಿ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾಳೆ. ಆ ದೂರು ಆಧರಿಸಿ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 354 (ಮಹಿಳೆಯರ ಮೇಲೆ ಉದ್ದೇಶಪೂರ್ವಕ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು 509 (ಮಾನಹಾನಿ) ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದೂ ಪೊಲೀಸರು ತಿಳಿಸಿದ್ದಾರೆ.