ಕಾಸರಗೋಡು: ವಯನಾಡು ಜಿಲ್ಲೆಯ ಪೆರಿಯಾದಲ್ಲಿ ನಡೆದ ಗುಂಡಿನ ಚಕಮಕಿ ಬಳಿಕ ಪರಾರಿಯಾಗಿರುವ ಮೂವರು ಮಹಿಳಾ ಮಾವೋವಾದಿಗಳ ಪತ್ತೆಗೆ ಕೇರಳ ಪೊಲೀಸರು ಕಳೆದ ಒಂದು ವಾರದಿಂದ ತೀವ್ರ ಶೋಧ ನಡೆಸುತ್ತಿದ್ದಾರೆ. ಮಾವೋವಾದಿ ಗುಂಪಿನ ಈ ಮೂವರು ಇತ್ತೀಚೆಗೆ ತಲಶ್ಶೇರಿ ಪ್ರದೇಶಕ್ಕೆ ತಲುಪಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಕಣ್ಣೂರು ನಗರ ಪೊಲೀಸರು ಪತ್ತೆಗಾಗಿ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ದೊರೆತ ಸುಳಿವುಗಳ ಆಧಾರದ ಮೇಲೆ ಉನ್ನತ ಅಧಿಕಾರಿಗಳು, ತಲಶ್ಶೇರಿ ಪ್ರದೇಶಕ್ಕೆ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಿದ್ದಾರೆ. ಮಾವೋವಾದಿಗಳು ತಲಶ್ಶೇರಿ ತಲುಪಿದ್ದಾರೆ ಎಂಬುದರ ಕುರಿತು ಪೊಲೀಸರಿಗೆ ಮಾಹಿತಿ ದೊರೆತಿದೆ. ತಕ್ಷಣವೇ ವ್ಯಾಪಕ ಹುಡುಕಾಟ ಪ್ರಾರಂಭಿಸಲಾಯಿತು. ಆದರೆ ಯಾವುದೇ ಕಾರ್ಯಕರ್ತರು ಪತ್ತೆಯಾಗಿಲ್ಲ. ಹುಡುಕಾಟ ಇನ್ನೂ ಮುಂದುವರಿದೆ. ಮಹಿಳಾ ಮಾವೋವಾದಿ ಸುಂದರಿ, ವನಜಾ ಮತ್ತು ಲತಾ ತಲಶ್ಶೇರಿ ತಲುಪಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇವರು ಖಾಸಗಿ ಬಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ನಿಲಂಬೂರ್ ಕರುಳಾಯಿ ಅರಣ್ಯದಲ್ಲಿ ಪಡೆಗಳ ಗುಂಡಿಗೆ ಬಲಿಯಾದ ಕುಪ್ಪು ದೇವರಾಜ್ ಮತ್ತು ಅಜಿತಾ ಅವರ ಪುಣ್ಯತಿಥಿಯನ್ನು ಮಾವೋವಾದಿಗಳು ಆಚರಿಸಲು ಯೋಜಿಸುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿ ಲಭಿಸಿದೆ. ನವೆಂಬರ್ 24 ಅನ್ನು ಸ್ಮರಣಾರ್ಥ ದಿನವನ್ನಾಗಿ ಆಚರಿಸಲು ಯೋಜನೆ ರೂಪಿಸಲಾಗಿದೆ. ಗುಪ್ತಚರ ಮಾಹಿತಿಯ ನಂತರ ಎಟಿಎಸ್ ಮತ್ತು ಥಂಡರ್ ಬೋಲ್ಟ್ ಘಟಕವು ಮಾವೋವಾದಿಗಳನ್ನು ಸೆರೆಹಿಡಿಯಲು ಕಾರ್ಯಾಚರಣೆಯನ್ನು ಯೋಜಿಸಿದೆ. ಕಾಡಿನೊಳಗೆ ಎರಡು ಟೆಂಟ್‌ಗಳು ಪತ್ತೆಯಾಗಿವೆ ಎಂಬ ಮಾಹಿತಿಯೂ ಎಟಿಎಸ್‌ಗೆ ದೊರೆತಿದೆ. ಥಂಡರ್ ಬೋಲ್ಟ್ ಕಮಾಂಡೋಗಳು ಮತ್ತು ಪೊಲೀಸ್ ತಂಡ ಮಾವೋವಾದಿಗಳನ್ನು ಹಿಡಿಯಲು ನಿಖರವಾದ ಪ್ಲ್ಯಾನ್ ಸಿದ್ಧಪಡಿಸಿದೆ.