ಮಲಪ್ಪುರಂ(ಕೇರಳ):ಬಾಲಕಿಯನ್ನು ವೇದಿಕೆಗೆ ಆಹ್ವಾನಿಸಿದ್ದಕ್ಕಾಗಿ ಮುಸ್ಲಿಂ ವಿದ್ವಾಂಸರೊಬ್ಬರು ಕಾರ್ಯಕ್ರಮ ಆಯೋಜಕರಿಗೆ ಛೀಮಾರಿ ಹಾಕಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ವೈರಲ್ಲಾದ ವಿಡಿಯೋ ಕ್ಲಿಪ್‌ನಲ್ಲಿ, ಮುಸ್ಲಿಂ ವಿದ್ವಾಂಸರ ಸಂಘಟನೆಯಾದ 'ಸಮಸ್ತ ಕೇರಳ ಜೆಇಎಂ-ಇಯ್ಯತುಲ್ ಉಲಮಾ'ದ ಹಿರಿಯ ಕಾರ್ಯನಿರ್ವಾಹಕರಾದ ಎಂ.ಟಿ.ಅಬ್ದುಲ್ಲಾ ಮುಸಲಿಯಾರ್ ಎಂಬುವವರು ಕಾರ್ಯಕ್ರಮ ಸಂಘಟಕರ ವಿರುದ್ಧ ಕೋಪಗೊಂಡಿರುವುದು ಗೊತ್ತಾಗುತ್ತದೆ.
ಮಲಪ್ಪುರಂ ಜಿಲ್ಲೆಯಲ್ಲಿ ಮದರಸಾ ಕಟ್ಟಡ ಉದ್ಘಾಟನೆ ಮಾಡುವ ಸಮಾರಂಭದಲ್ಲಿ ಹಲವು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿತ್ತು. ಈ ವೇಳೆ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಸನ್ಮಾನಿಸಲು ವೇದಿಕೆ ಮೇಲೆ ಕರೆಯಲಾಗಿತ್ತು. ಬಾಲಕಿಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನಾಯಕ ಪಾಣಕ್ಕಾಡ್ ಸೈಯದ್ ಅಬ್ಬಾಸ್ ಅಲಿ ಶಿಹಾಬ್ ತಂಗಲ್ ಅವರು ಸ್ಮರಣಿಕೆಯನ್ನು ಹಸ್ತಾಂತರಿಸಿದರು. ಇದಕ್ಕೆ ಎಂ.ಟಿ.ಅಬ್ದುಲ್ಲಾ ಮುಸಲಿಯಾರ್ ಸಿಡಿಮಿಡಿಗೊಂಡಿದ್ದಾರೆ.
ಬಾಲಕಿಯನ್ನು ವೇದಿಕೆಗೆ ಆಹ್ವಾನಿಸಿದ್ದು ಏಕೆ?, 10ನೇ ತರಗತಿಯ ಬಾಲಕಿಯನ್ನು ವೇದಿಕೆಗೆ ಕರೆದಿದ್ದು ಯಾರು? ಎಂದು ಪ್ರಶ್ನಿಸಿರುವ ಎಂ.ಟಿ.ಅಬ್ದುಲ್ಲಾ ಮುಸಲಿಯಾರ್ ಇನ್ನೊಮ್ಮೆ ಬಾಲಕಿಯರನ್ನು ವೇದಿಕೆ ಮೇಲೆ ಕರೆಯಬೇಡಿ. ಪ್ರಶಸ್ತಿ ಪಡೆಯಲು ಆಕೆಯ ಪೋಷಕರನ್ನು ಕರೆಯಿರಿ. ನಾವು ಇಲ್ಲಿ ಕುಳಿತಿರುವಾಗ ಇಂಥ ಕೆಲಸಗಳನ್ನು ಮಾಡಬೇಡಿ. ಇದು ಫೋಟೋಗಳಲ್ಲಿ, ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ತಂಗಲ್ ಅವರು ಪಕ್ಕದಲ್ಲಿ ನಿಂತಿದ್ದಾಗ ಎಂ.ಟಿ.ಅಬ್ದುಲ್ಲಾ ಮುಸಲಿಯಾರ್ ಕಾರ್ಯಕ್ರಮ ಸಂಘಟಕರ ವಿರುದ್ಧ ಕಿಡಿ ಕಾರಿದರು. ವಿಡಿಯೋದಲ್ಲಿ ಬಾಲಕಿಯ ಹೆಸರನ್ನು ವೇದಿಕೆ ಮೇಲೆ ಬರಲು ಘೋಷಿಸಿದ ವ್ಯಕ್ತಿ ಕ್ಷಮೆಯಾಚಿಸುತ್ತಿರುವುದು ಕಂಡುಬಂದಿದೆ.