ಕಾಸರಗೋಡ(ಕೇರಳ):ಅದೃಷ್ಟ ಯಾರನ್ನ ಯಾವಾಗ ಹೇಗೆ ಹುಡುಕಿಕೊಂಡು ಬರುತ್ತದೆ ಎಂಬುದು ಗೊತ್ತಾಗುವುದೇ ಇಲ್ಲ. ಅದಕ್ಕೆ ಉತ್ತಮ ಉದಾಹರಣೆಯೊಂದು ಕೇರಳದಲ್ಲಿ ನಡೆದಿದೆ. ಸಾಲದ ಸುಳಿಯಲ್ಲಿ ಸಿಲುಕಿ ಮನೆ ಮಾರಲು ಮುಂದಾಗಿದ್ದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಲಾಟರಿ ಹೊಡೆದಿದೆ. ಕೇರಳದ ಕಾಸರಗೋಡಿನ ಮೊಹಮ್ಮದ್ ಬಾವ(50) ಎಂಬಾತನಿಗೆ ಈ ಅದೃಷ್ಟ ಲಕ್ಷ್ಮಿ ಒಲಿದು ಬಂದಿದ್ದಾಳೆ. ಇದರಿಂದ ಪೇಂಟರ್ ಇದೀಗ ಇನ್ನೊಬ್ಬರಿಗೆ ಸಾಲ ಕೊಡುವಷ್ಟು ಶ್ರೀಮಂತನಾಗಿದ್ದಾನೆ.
ಕೇರಳದಲ್ಲಿ ಪೇಂಟರ್ ಆಗಿ ಕೆಲಸ ಮಾಡ್ತಿದ್ದ ಮೊಹಮ್ಮದ್ 8 ತಿಂಗಳ ಹಿಂದೆ ಹೊಸದಾಗಿ ಮನೆ ನಿರ್ಮಾಣ ಮಾಡಿದ್ದರು. ಆದರೆ, ವಿವಿಧ ಬ್ಯಾಂಕ್ಗಳಲ್ಲಿ ಮತ್ತು ವ್ಯಕ್ತಿಗಳಲ್ಲಿ ಹಣ ಪಡೆದುಕೊಂಡಿದ್ದರು. ಹೀಗಾಗಿ, ಸಾಲದ ಸುಳಿಯಲ್ಲಿ ಸಿಲುಕಿಕೊಂಡ ಕಾರಣ ಮನೆ ಮಾರಾಟಕ್ಕೆ ಮುಂದಾಗಿದ್ದರು. ಹೀಗಾಗಿ, ಮಂಜೇಶ್ವರದಲ್ಲಿ ನಿರ್ಮಿಸಿದ್ದ ಮನೆ ಮಾರಾಟಕ್ಕಿಟ್ಟು, ಅದಕ್ಕೋಸ್ಕರ ಟೋಕನ್ ಹಣ ಸ್ವೀಕರಿಸಲು ಮುಂದಾಗಿದ್ದರು. ಇದಕ್ಕೆ ಕೇವಲ ಎರಡು ಗಂಟೆ ಬಾಕಿ ಇರುವಾಗಲೇ 1 ಕೋಟಿ ರೂಪಾಯಿ ಲಾಟರಿ ಹೊಡೆದಿದೆ.