ತಿರುವನಂತಪುರಂ(ಕೇರಳ): ಇ-ಕಾಮರ್ಸ್ ತಾಣಗಳಲ್ಲಿ ಆರ್ಡರ್ ಮಾಡಿದ ವಸ್ತುಗಳ ಬದಲಾಗಿ ಗ್ರಾಹಕರಿಗೆ ಬೇರೆ ವಸ್ತುಗಳನ್ನು ನೀಡಿರುವ ಉದಾಹರಣೆಗಳು ಆಗಾಗ ನಡೆಯುತ್ತಲೇ ಇವೆ.
ಕೇರಳ ಮೂಲದ ವ್ಯಕ್ತಿಯೊಬ್ಬರು 70 ಸಾವಿರ ರೂಪಾಯಿ ಮೌಲ್ಯದ ಐಫೋನ್ 12 ಆರ್ಡರ್ ಮಾಡಿದರೆ ಅವರಿಗೆ ಒಂದು ವಿಮ್ ಸೋಪು, 5 ರೂ.ನಾಣ್ಯ ಬಂದಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಇದೀಗ ಇದೇ ರಾಜ್ಯದಲ್ಲಿ ಮತ್ತೊಬ್ಬ ಗ್ರಾಹಕನಿಗೂ ಅಮೆಜಾನ್ ಶಾಕ್ ಕೊಟ್ಟಿದೆ.
ಪಾಸ್‌ಪೋರ್ಟ್ ಇಟ್ಟುಕೊಳ್ಳುವ ಒಂದು ಪೌಚ್ ಆರ್ಡರ್ ಮಾಡಿದ್ರೆ ಪೌಚ್ ಜೊತೆಗೆ ಒರಿಜಿನಲ್ ಪಾಸ್‌ಪೋರ್ಟ್ ಅನ್ನೇ ಡೆಲಿವರಿ ಮಾಡಿರುವ ಘಟನೆ ವಯನಾಡು ಜಿಲ್ಲೆಯ ಕಣಿಯಂಬೆಟ್ಟ ಎಂಬಲ್ಲಿ ನಡೆದಿದೆ.
ಮಿಥುನ್ ಬಾಬು ಎಂಬ ವ್ಯಕ್ತಿ ಕಳೆದ ಅಕ್ಟೋಬರ್ 30ರಂದು ಅಮೆಜಾನ್‌ನಲ್ಲಿ ಪಾಸ್‌ಪೋರ್ಟ್ ಕವರ್ ಆರ್ಡರ್ ಮಾಡಿದ್ದರು. ನವೆಂಬರ್ 1 ರಂದು ಆರ್ಡರ್ ಮಾಡಿದ್ದ ಕವರ್‌ನ ಪಾರ್ಸೆಲ್ ತಲುಪಿದೆ. ಪಾರ್ಸೆಲ್ ತೆರೆದು ನೋಡಿದರೆ ಅದರಲ್ಲಿ ಪಾರ್‌ಪೋರ್ಟ್ ಕವರ್ ಜೊತೆಗೆ ಬೇರೊಬ್ಬ ವ್ಯಕ್ತಿಯ ಪಾಸ್‌ಪೋರ್ಟ್ ಕೂಡ ಬಂದಿದೆ. ಕೂಡಲೇ ಅವರು ಕಸ್ಟಮರ್ ಕೇರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಇಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಉತ್ತರಿಸಿದ್ದಾರೆ.
ಬಳಿಕ ಮಿಥುನ್ ಬಾಬು ಪಾಸ್‌ಪೋರ್ಟ್ ಅನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸುವ ಪ್ರಯತ್ನ ಆರಂಭಿಸಿದ್ದಾರೆ. ಪಾಸ್‌ಪೋರ್ಟ್‌ನಲ್ಲಿರುವ ವಿವರಗಳ ಪ್ರಕಾರ, ಅದು ತ್ರಿಶೂರ್‌ನ ಮೊಹಮ್ಮದ್ ಸಾಲಿಹ್ ಎಂಬುವರಿಗೆ ಸೇರಿದ್ದೆಂದು ಗೊತ್ತಾಗಿದೆ. ಪಾಸ್‌ಪೋರ್ಟ್‌ನಲ್ಲಿ ಫೋನ್‌ನಂಬರ್‌ನಂತಹ ವಿವರಗಳಿಲ್ಲ. ಹೀಗಿದ್ದರೂ ಮಿಥುನ್, ಸಾಲಿಹ್ ಅವರ ಮಾಹಿತಿ ಸಂಗ್ರಹಿಸಿ ಸಂಪರ್ಕಿಸಿದ್ದಾರೆ. ಶೀಘ್ರವೇ ತಮ್ಮ ಪಾಸ್‌ಪೋರ್ಟ್ ನೀಡುವುದಾಗಿ ತಿಳಿಸಿದ್ದಾರೆ.
ಒರಿಜಿನಲ್ ಪಾಸ್‌ಪೋರ್ಟ್ ಬಂದಿದ್ದು ಹೇಗೆ?
ಸಾಲಿಹ್ ಮೊದಲು ಪಾಸ್‌ಪೋರ್ಟ್ ಕವರ್ ಆರ್ಡರ್ ಮಾಡಿದ್ದಾರೆ. ಕವರ್ ಬಂದಾಗ ಅದರಲ್ಲಿ ತನ್ನ ಪಾಸ್ ಪೋರ್ಟ್ ಇಟ್ಟು ಚೆಕ್ ಮಾಡಿದ್ದಾರೆ. ಅದು ಇಷ್ಟವಾಗದಿದ್ದಾಗ ಕವರ್ ವಾಪಸ್ ಕಳಿಸಿದ್ದಾರೆ. ಆದರೆ ಪಾಸ್‌ಪೋರ್ಟ್ ಅನ್ನು ಕವರ್‌ನಲ್ಲೇ ಬಿಟ್ಟು ವಾಪಸ್ ಮಾಡಿರಬಹದು ಎಂದು ಮಿಥುನ್ ಬಾಬು ಹೇಳಿದ್ದಾರೆ. ಕವರ್ ವಾಪಸ್ ಪಡೆದಿದ್ದ ಅಮೆಜಾನ್ ಅದನ್ನು ಪರಿಶೀಲನೆ ಮಾಡದೆ ಬೇರೆ ಆರ್ಡರ್ ಬಂದಾಗ ಅದನ್ನು ಮತ್ತೊಬ್ಬ ಗ್ರಾಹಕನಿಗೆ ನೀಡಿದಾಗ ಇಂತಹ ಎಡವಟ್ಟಾಗಿದೆ ಎನ್ನಲಾಗಿದೆ.